ಬೆಂಗಳೂರು: ಕಾಂಗ್ರೆಸ್ ಪಕ್ಷ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ‘ಕೈ’ ಬಿಟ್ಟು ಕಮಲ ಹಿಡಿದಿದ್ದಾರೆ.
ಇಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಮರುಸೇರ್ಪಡೆಯಾಗಿದ್ದಾರೆ. ಅಲ್ಲದೇ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಹೈಕಮಾಂಡ್ ಜೊತೆ ಚರ್ಚಿಸಲು ಶೆಟ್ಟರ್ ಈಗಾಗಲೇ ದೆಹಲಿ ಬಿಜೆಪಿ ಕಚೇರಿಗೆ ತೆರಳಿದ್ದು, ಜೆಪಿ ನಡ್ಡಾ ನೇತೃತ್ವದಲ್ಲಿ ಬಿಜೆಪಿಗೆ ಮರುಸೇರ್ಪಡೆಯಾಗಿದ್ದಾರೆ.
ಶೆಟ್ಟರ್‌ಗೆ ಗಾಳ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಜಗದೀಶ್ ಶೆಟ್ಟರ್, ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲು ಕಂಡಿದ್ದರು. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಮತಗಳನ್ನು ತರುವಲ್ಲಿ ಶೆಟ್ಟರ್ ಯಶಸ್ವಿಯಾಗಿದ್ದರು.
ಶೆಟ್ಟರ್‌ಗೆ ಲೋಕಸಭೆಗಾ? ರಾಜ್ಯಸಭೆಗಾ?
ಈಗಾಗಲೇ ಕಾಂಗ್ರೆಸ್ ಸೇರಿ 9 ತಿಂಗಳು ಕಳೆದಿದ್ದರೂ ಅಲ್ಲಿ ಜಗದೀಶ್ ಶೆಟ್ಟರ್‌ಗೆ ಸೂಕ್ತ ಸ್ಥಾನಮಾನವನ್ನು ನೀಡಲಾಗಿಲ್ಲ. ಅಲ್ಲಿ ಅವರನ್ನು ಕಾಂಗ್ರೆಸ್ ನಾಯಕರು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಎಲ್ಲ ಬೇಸರಗಳಿಂದ ಶೆಟ್ಟರ್ ಮರಳಿ ಗೂಡಿಗೆ ಸೇರಲು ಹೊರಟಿದ್ದಾರೆ ಎನ್ನಲಾಗಿದೆ.
ಹೀಗಾಗಿ ಅಮಿತ್ ಶಾ ಜತೆಗೆ ಮಾತುಕತೆ ಮಾಡಿದ್ದು, ಉನ್ನತ ಸ್ಥಾನಮಾನ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೆ, ರಾಜ್ಯಸಭೆಗೆ ಆಯ್ಕೆ ಅಥವಾ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವ ಆಫರ್ ನೀಡಲಾಗಿದೆ ಎನ್ನಲಾಗಿದೆ.