ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಹಿಮಂತ ಬಿಸ್ವಾ ಶರ್ಮಾ ಅವರ ಹೃದಯ ದ್ವೇಷದಿಂದ ತುಂಬಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಬರ್ಪೇಟಾ ಜಿಲ್ಲೆಯಲ್ಲಿ ಭಾರತ್ ಜೋಡೊ ನ್ಯಾಯ್ ಯಾತ್ರೆಯ 7ನೇ ದಿನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ನಾನು ಹೆದರುವುದಿಲ್ಲ. ನಮ್ಮ ವಿರುದ್ಧ ಮತ್ತಷ್ಟು ಎಫ್ಐಆರ್ಗಳನ್ನು ದಾಖಲಿಸಿ. ಬಿಜೆಪಿ ಆಡಳಿತವಿರುವ ರಾಜ್ಯವು ತಮಗೆ ಎಷ್ಟು ಸಾಧ್ಯವೋ ಅಷ್ಟು ಪ್ರಕರಣಗಳನ್ನು ನಮ್ಮ ಮೇಲೆ ದಾಖಲಿಸಲು ಧೈರ್ಯ ಮಾಡಿದೆ. ಆದರೆ, ನಾವು ಹೆದರುವುದಿಲ್ಲ ಎಂದು ಅಸ್ಸಾಂ ಪೊಲೀಸರಿಗೆ ಸವಾಲು ಹಾಕಿದ್ದಾರೆ.
ಬಿಜೆಪಿ-RSS ಕೂಡ ನನ್ನ ಹೆದರಿಸಲು ಸಾಧ್ಯವಿಲ್ಲ
ಇದೇ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭ್ರಷ್ಟ ಮುಖ್ಯಮಂತ್ರಿ ಎಂದು ಟೀಕಿಸಿದ್ದಾರೆ. ಕೇಸ್ ಹಾಕುವ ಮೂಲಕ ನನ್ನನ್ನು ಬೆದರಿಸಬಹುದು ಎಂಬ ಆಲೋಚನೆ ಹಿಮಂತ ಬಿಸ್ವ ಶರ್ಮಾ ಅವರಿಗೆ ಹೇಗೆ ಬಂದಿತೋ ಗೊತ್ತಿಲ್ಲ. ಎಷ್ಟು ಸಾಧ್ಯವೋ ಅಷ್ಟು ಪ್ರಕರಣಗಳನ್ನು ದಾಖಲಿಸಿ. ಇನ್ನೂ 25 ಕೇಸ್ ದಾಖಲು ಮಾಡಿ, ಬಿಜೆಪಿ-ಆರ್‌ಎಸ್‌ಎಸ್ ಕೂಡ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ-RSS ಇತಿಹಾಸ ಅಳಿಸಲು ಬಯಸಿದೆ
ಅಸ್ಸಾಂನ ಭಾಷೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಅಳಿಸಿ ಹಾಕಲು ಬಿಜೆಪಿ-ಆರ್‌ಎಸ್‌ಎಸ್ ಬಯಸಿದೆ. ಅಸ್ಸಾಂ ಅನ್ನು ನಾಗ್ಪುರದಿಂದ ಹೊರಗಿಡಲು ಯತ್ನಿಸುತ್ತಿದೆ. ಆದರೆ, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಅಸ್ಸಾಂ ಅನ್ನು ಅಸ್ಸಾಂನಿಂದ ಮಾತ್ರ ಆಳಲು ಸಾಧ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.