ಬೆಂಗಳೂರು : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಬರುವ ವಿಚಾರ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಮೇಲೆ ನಮಗೆ ಕರುಣೆ ಇದೆ ಎಂದು ಹೇಳಿದ್ದಾರೆ.
ಪಾಪ ಅವರು ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪಾಗಿ ಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದು ಎಂಟು ತಿಂಗಳು ಆದರೂ, ಅವರಿಗೆ ಒಂದು ಅಧಿಕಾರ ಅಥವಾ ಜವಾಬ್ದಾರಿ ಕೊಟ್ಟಿಲ್ಲ. ಇದರಿಂದ ಅವರು ಕಾಂಗ್ರೆಸ್ನ ವೇದಿಕೆಯಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಕುಟುಕಿದ್ದಾರೆ.
ನಮ್ಮ ಕಥೆ ಏನಾಯ್ತು ಅಂತ ಯೋಚಿಸಲಿ
ನಮ್ಮಲ್ಲಿ ಇದ್ದಾಗ ಇಬ್ಬರು ವೇದಿಕೆಯ ಮುಂಭಾಗದಲ್ಲಿ ಕಾಣಿಸುತ್ತಿದ್ರು. ಕೋರ್ ಕಮಿಟಿ ಸದಸ್ಯರು ಬೇರೆ ಆಗಿದ್ರು. ಇವಾಗ ಅವ್ರು ಕಾಂಗ್ರೆಸ್ ನಲ್ಲಿರುವ ಪರಿಸ್ಥಿತಿ ನೋಡಿ ನನಗೆ ಬೇಸರ ಅನಿಸುತ್ತೆ. ಅವರು ಅಲ್ಲಿ ಹೋಗಿ ನಮ್ಮ ಕಥೆ ಏನಾಯ್ತು ಅಂತ ಯೋಚಿಸಲಿ. ಅವರು ಮತ್ತೆ ಬಿಜೆಪಿಗೆ ಬರುವ ಬಗ್ಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡ್ತಾರೆ ಎಂದು ಆರ್. ಅಶೋಕ್ ಹೈಕಮಾಂಡ್ ಕಡೆ ಬೊಟ್ಟು ಮಾಡಿದ್ದಾರೆ.
ಬಿರಿಯಾನಿ ತಿದ್ದಿದ್ದಷ್ಟೇ ಒಕ್ಕೂಟಕ್ಕೆ ಗ್ಯಾರಂಟಿ
ಇಂಡಿಯಾ ಒಕ್ಕೂಟದಲ್ಲಿ ಬಿರುಕು ವಿಚಾರದ ಬಗ್ಗೆ ಮಾತನಾಡಿದ ಆರ್. ಅಶೋಕ್, ಬೆಂಗಳೂರಿನ ತಾಜ್ ವೆಸ್ಟ್ ಹೊಟೇಲ್ನಲ್ಲಿ ಬಿರಿಯಾನಿ ತಿದ್ದಿದ್ದಷ್ಟೇ ಇಂಡಿಯಾ ಒಕ್ಕೂಟಕ್ಕೆ ಗ್ಯಾರಂಟಿ. ಅವರು ಒಗ್ಗಟ್ಟಾಗಿರೋ ಗ್ಯಾರಂಟಿ ಇಲ್ಲ ಎಂದು ಲೇವಡಿ ಮಾಡಿದ್ದಾರೆ.