Thursday, November 7, 2024

ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣದಲ್ಲಿ ರಾಜ್ಯದ ಸಾಧನೆ ತೃಪ್ತಿಕರವಾಗಿಲ್ಲ: ಸಿಎಂ

ಬೆಂಗಳೂರು: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣದಲ್ಲಿ ರಾಜ್ಯದ ಸಾಧನೆ ತೃಪ್ತಿಕರವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.‌

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದರು. ಶೋಷಣೆಗೆ ಒಳಗಾದವರಿಗೆ ವ್ಯವಸ್ಥೆ ಮೇಲೆ ನಂಬಿಕೆ ಬರಬೇಕಾದರೆ ದೌರ್ಜನ್ಯ ಪ್ರಕರಣಗಳ ತನಿಖೆಯ ಗುಣಮಟ್ಡ ಹೆಚ್ಚಾಗಬೇಕು. ವೈಜ್ಞಾನಿಕವಾಗಿ ಸಮರ್ಥ ಆರೋಪ ಪಟ್ಟಿ ಸಲ್ಲಿಕೆಯಾಗಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕಿ. ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು. ಇಲ್ಲದಿದ್ದರೆ ಡಿಸಿಪಿ ಗಳನ್ನೇ ಈ ವೈಫಲ್ಯಕ್ಕೆ ಹೊಣೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ವರಿಸಿದರು.

ಇದನ್ನೂ ಓದಿ: KPSCಯ ಅನ್ಯಾಯ ಪ್ರಶ್ನಿಸಿದ ವಿದ್ಯಾರ್ಥಿನಾಯಕನ ಬಂಧನ ಖಂಡಿಸಿ ಸಿಎಂಗೆ ಮುಖ್ಯಮಂತ್ರಿ ಚಂದ್ರು ಪತ್ರ!

ಪೊಲೀಸರಿಗೆ ನಮ್ಮ ಸರ್ಕಾರ ಸಂಪೂರ್ಣ ಫ್ರೀ ಹ್ಯಾಂಡ್ ಕೊಟ್ಟಿದೆ. ಪೊಲೀಸರ ಕೆಲಸದಲ್ಲಿ ಮೂಗು ತೂರಿಸಬಾರದು ಎನ್ನುವುದು ನನ್ನ ಬದ್ಧತೆ. ಆದರೆ ನಾವು ಫ್ರೀ ಹ್ಯಾಂಡ್ ಕೊಟ್ಟಿದ್ದು ದುರುಪಯೋಗ ಆಗಬಾರದು. ಅದು ಜನರಿಗೆ ಅನುಕೂಲ ಆಗುವಂತಿರಬೇಕು ಎಂದು ಸೂಚಿಸಿದರು.

ವರ್ಗಾವಣೆಗಳಿಗೆ ಪೊಲೀಸ್ ಅಧಿಕಾರಿಗಳು ಹಾತೊರೆಯುವುದು, ಜಾತಿ ಬಳಸುವುದು ಅತ್ಯಂತ ಕೆಟ್ಟದ್ದು. ಹಾಗೆ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ತಿಳಿ ಹೇಳಿದರು. ನಮ್ಮದು ಜಾತ್ಯತೀತ ರಾಷ್ಟ್ರ. ನಾವುಗಳೇ ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು ಎಂದರು.

ಕರ್ನಾಟಕ ನಾಮಕರಣಗೊಂಡು, ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ನೀಡಲಾಗುವುದು. ಖಾಲಿ ಇರುವ ಪೊಲೀಸ್ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ವೇಳೆ ಗೃಹ ಸಚಿವರಾದ ಜಿ.ಪರಮೇಶ್ವರ್, ಗೃಹ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು‌ ನಸೀರ್ ಅಹಮದ್ ಅವರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES