ಮಂಡ್ಯ : ರಾಗಿ ಮುದ್ದೆ ಉಣ್ಣುವ ಸ್ಫರ್ಧೆಯಲ್ಲಿ ಅರಕೆರೆಯ ಈರೇಗೌಡ ಎಂಬಾತ 30 ನಿಮಿಷದಲ್ಲಿ 10 ಮುದ್ದೆ ಹೊಟ್ಟೆಗೆ ಇಳಿಸಿ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.
ಮಂಡ್ಯದಲ್ಲಿ ಸಿರಿಧಾನ್ಯ ಹಬ್ಬದ ಅಂಗವಾಗಿ ನಾಟಿಕೋಳಿ ಸಾರು, ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಈರೇಗೌಡ ಬರೋಬ್ಬರಿ 2.7 ಕೆ.ಜಿ. ತೂಕದ ಮುದ್ದೆ ತಿಂದು ಗೆದ್ದು ಬೀಗಿದ್ದಾರೆ.
ಇನ್ನೂ ಅರಕೆರೆಯವರೇ ಆದ ದಿಲೀಪ್ ಅವರು ಈರೇಗೌಡರಿಗೆ ಪೈಪೋಟಿ ನೀಡಿದ್ದರು. ಇವರು 30 ನಿಮಿಷದಲ್ಲಿ 1.682 ಕೆ.ಜಿ ಮುದ್ದೆ ತಿನ್ನುವ ಮೂಲಕ ಎರಡನೇ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಟಿ.ಎಂ. ಹೊಸೂರಿನ ರವೀಂದ್ರ ಅವರು 1.544 ಕೆ.ಜಿ. ಮುದ್ದೆ ಹೊಟ್ಟೆಗೆ ಇಳಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಅವರೂ ಸಹ ಭಾಗವಹಿಸಿ ಗಮನ ಸೆಳೆದಿದ್ದಾರೆ.
ನಾಟಿಕೋಳಿ ಸಾರು, ಮಾಂಸ ಹಾಗೂ ಮೊಟ್ಟೆ
ಸ್ಪರ್ಧೆಯಲ್ಲಿ 10 ಮಂದಿ ಭಾಗವಹಿಸಿದ್ದರು. ಮುದ್ದೆ ತಿನ್ನಲು 30 ನಿಮಿಷಗಳ ಸಮಯ ನಿಗದಿಪಡಿಸಲಾಗಿತ್ತು. ಮುದ್ದೆಯ ಜೊತೆಗೆ ನಾಟಿಕೋಳಿ ಸಾರು, ನಾಟಿ ಕೋಳಿ ಮಾಂಸ ಹಾಗೂ ಮೊಟ್ಟೆಯನ್ನು ನೀಡಲಾಗಿತ್ತು. 62 ವರ್ಷದ ಈರೇಗೌಡ ನಿಗದಿತ ಸಮಯದಲ್ಲಿ ಬರೋಬ್ಬರಿ 10 ಮುಂದೆ ಹೊಟ್ಟೆಗೆ ಇಳಿಸಿದರು.