ರಾಯಚೂರು : ಈ ಹಿಂದೆ ಬಿಜೆಪಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ. 15 ಲಕ್ಷ ರೂಪಾಯಿ ಅಕೌಂಟ್ಗೆ ಹಾಕ್ತಿನಿ ಅಂದಿದ್ರು ಹಾಕಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಕಿದರು.
ರಾಯಚೂರಿನ ಸಿಂಧನೂರಿನಲ್ಲಿ ಹಮ್ಮಿಕೊಂಡಿದ್ದ ತಿಮ್ಮಾಪೂರ ಏತನೀರಾವರಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಐದು ಉಚಿತ ಗ್ಯಾರಂಟಿ ಜಾರಿಗೊಳಿಸಿರುವುದು ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಮೊದಲು. ಕೊಟ್ಟ ಮಾತನ್ನ ಉಳಿಸಿಕೊಳ್ಳುವುದು ಸುಲಭವಲ್ಲ ಎಂದರು.
ನಾವು ಯುವನಿಧಿ ಜಾರಿಗೆ ತಂದಿದ್ದು ನಿರುದ್ಯೋಗಿ ಯುವಕರ ಖಾತೆಗೆ ಹಣ ಹಾಕುತ್ತೇವೆ. 1 ಕೋಟಿ ಮಹಿಳೆಯರಿಗೆ 2,000 ರೂ, ಕೊಡುತ್ತಿದ್ದೇವೆ. ಅಕ್ಕಿ ಬದಲಿಗೆ ಹಣವನ್ನ ನೇರವಾಗಿ ಅವರ ಅಕೌಂಟ್ಗೆ ಹಾಕುತ್ತಿದ್ದೇವೆ. ಮಹಿಳೆಯರು ಫ್ರಿಯಾಗಿ ಬಸ್ನಲ್ಲಿ ಓಡಾಡುತ್ತಿದ್ದಾರೆ. ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳಿದರು.
ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿಕೊಂಡಿದೆ. ಇದಕ್ಕಾಗಿ ನವಲಿ ಸಮಾನಾಂತರ ಜಲಾಶಯ ಮಾಡಲು ಯೋಜನೆ ರೂಪಿಸುತ್ತಿದ್ದೇವೆ.ಆಂಧ್ರಪ್ರದೇಶದ ಜೊತೆಗೂ ಮಾತುಕತೆ ನಡೆಸಿದ್ದೇವೆ, ಇದರಿಂದ ಅವರಿಗೂ ಅನುಕೂಲವಾಗುತ್ತದೆ. 33 ಟಿಎಂಸಿ ಸಣ್ಣ ಪ್ರಮಾಣದ ನೀರಲ್ಲ, ಆದಷ್ಟು ಜಾಗೃತೆಯಿಂದ ಯೋಜನೆ ರೂಪಿಸುತ್ತಿದ್ದೇವೆ. ತಿಮ್ಮಾಪೂರ ಏತ ನೀರಾವರಿ ಯೋಜನೆ ಸುಮಾರು 35 ಸಾವಿರ ಎಕರೆಗೆ ಅನುಕೂಲವಾಗುತ್ತದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಸುಮಾರು 100 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದರು.
ಮತ್ತೆ ಕವನ ಹೇಳಿದ ಡಿಕೆಶಿ
ಉಚಿತ ಗ್ಯಾರಂಟಿ ಯೋಜನೆ ಬಗ್ಗೆ ಮತ್ತೆ ಡಿ.ಕೆ. ಶಿವಕುಮಾರ್ ಅವರು ಕವನ ವಾಚನ ಮಾಡಿದರು. ಐದು ಬೆರಳು ಸೇರಿ ಒಂದು ಮುಷ್ಟಿಯಾಯಿತು. ಐದು ಗ್ಯಾರಂಟಿ ಸೇರಿ ‘ಕೈ’ಗೆ ಶಕ್ತಿ ಬಂದಿತು. ಅರಳಿದ ಕಮಲ ಮುದುಡಿ ಹೋಯಿತು. ಐದು ಗ್ಯಾರಂಟಿ ನೋಡಿ ತೆನೆ ಹೊತ್ತ ಮಹಿಳೆ ತೆನೆ ಎಸೆದು ಹೋದಳು ಎನ್ನುವ ಮೂಲಕ ವಿಪಕ್ಷಗಳಿಗೆ ಟಾಂಗ್ ಕೊಟ್ಟರು.