ದಕ್ಷಿಣ ಕನ್ನಡ: ಜಿಲ್ಲೆಯ ಉಳ್ಳಾಲದ ಸಮ್ಮರ್ ಸ್ಯಾಂಡ್ ಬೀಚ್ ಗೆ ತೆರಳಿದ್ದ ಇಬ್ಬರು ಯುವಕರು ಸಮುದ್ರ ಪಾಲಾಗಿದ್ದು, ಈ ಪೈಕಿ ಓರ್ವ ಸಾವನ್ನಪ್ಪಿದ್ದರೆ ಮತ್ತೋರ್ವ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಅಲೆಯ ಸೆಳೆತಕ್ಕೆ ಸಿಲುಕಿ ಚಿಕ್ಕಮಗಳೂರು ಮೂಲದ ಇಬ್ಬರು ಸಮುದ್ರ ಪಾಲಾಗಿರುವ ಘಟನೆ ಉಳ್ಳಾಲದ ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ಶುಕ್ರವಾರ ನಡೆದಿದೆ. ಈ ಪೈಕಿ ಸಲ್ಮಾನ್ ಎಂಬಾತನ ಮೃತ ದೇಹ ಸಿಕ್ಕಿದ್ದು, ಬಶೀರ್ ಎಂಬಾತನಿಗಾಗಿ ಶೋಧ ಮುಂದುವೆರೆದಿದೆ.
ಇದನ್ನೂ ಓದಿ: ಮೃತ ಬಿಎಂಟಿಸಿ ಚಾಲಕನ ಪತ್ನಿಗೆ 50ಲಕ್ಷ ರೂ. ಚೆಕ್ ವಿತರಣೆ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ!
ಮೂಲಗಳ ಪ್ರಕಾರ ಕುಟುಂಬ ಸಮೇತ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ್ದ ಇವರು ಬಳಿಕ ಬೀಚ್ ಗೆ ತೆರಳಿ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಶೀರ್, ಸಲ್ಮಾನ್ ಹಾಗೂ ಸೈಫ್ ಆಲಿ ಸಮುದ್ರದ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದರು. ಈ ವೇಳೆ ಸ್ಥಳೀಯ ಈಜುಗಾರರು ಸಲ್ಮಾನ್ ಹಾಗೂ ಸೈಫುಲ್ಲಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಶೀರ್ ನೀರಿನಲ್ಲಿ ಮುಳುಗಿ ನಾಪತ್ತೆ ಆಗಿದ್ದು, ಮೃತ ದೇಹ ಕ್ಕಾಗಿ ಶೋಧ ಮುಂದುವರಿದಿದೆ. ಅತ್ತ ಆಸ್ಪತ್ರೆಯಲ್ಲಿ ಸಲ್ಮಾನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸದ್ಯ ಸೈಫುಲ್ಲಾ ಅವರು ಚೇತರಿಸಿ ಕೊಂಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.