ಬೆಳಗಾವಿ : ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ನಿಗಿನಿಗಿ ಕೆಂಡವಾಗಿದ್ದಾರೆ. ಇನ್ನೂ ಈ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಸಿದ್ದರಾಮಯ್ಯ ರಾಜ್ಯದ ಎಲ್ಲರ ಮುಖ್ಯಮಂತ್ರಿ ಆಗಿದ್ದಾರೆಯೇ ಹೊರತು ಯಾವುದೇ ಒಂದು ಪಂಗಡದ ಮುಖ್ಯಮಂತ್ರಿ ಅಲ್ಲ’ ಎಂದು ತಿಳಿಸಿದ್ದಾರೆ.
‘ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಒಂದು ಕಾನೂನು ಮಾಡುವುದರಿಂದ ಸಮಾಜದಲ್ಲಿ ದೊಡ್ಡ ಕ್ಷೋಭೆ ಉಂಟು ಮಾಡಬಹುದು. ಕಾನೂನು ಮಾಡಲಿ. ಆದರೆ, ಅದು ಸಮಾಜದಲ್ಲಿ ಒಂದು ಪಂಗಡವನ್ನು ಮಾತ್ರ ಗುರಿಯಾಗಿರಿಸಿಕೊಂಡು ಮಾಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
ಇದನ್ನ ಯಾರು ಮಾಡಬಾರದು
‘ಇತ್ತೀಚೆಗೆ ಪರೀಕ್ಷೆ ಬರೆಯುವಾಗ ಹಿಂದೂಗಳಾದವರು ಕಾಲುಂಗರ, ತಾಳಿ ತೆಗೆಯಬೇಕು ಅಂದರು. ಒಂದು ಕಡೆ ಹೀಗೆ, ಮತ್ತೊಂದು ಪಂಗಡದವರಿಗೆ ಮುಸುಕು (ಹಿಜಾಬ್) ದಾರಿಗಳು ಆಗಿ ಹೋಗಬಹುದು ಅಂತಾರೆ. ಇದನ್ನ ಯಾರು ಮಾಡಬಾರದು, ಇವರಂತೂ (ಸಿಎಂ ಸಿದ್ದರಾಮಯ್ಯ) ಖಂಡಿತವಾಗಿ ಮಾಡಬಾರದು’ ಎಂದು ವಿಶ್ವ ಪ್ರಸನ್ನ ತೀರ್ಥ ಪೇಜಾವರ ಶ್ರೀಗಳು ತಿಳಿಸಿದ್ದಾರೆ.