ಚಿಕ್ಕಮಗಳೂರು : ಹಿಜಾಬ್ ನಿಷೇಧ ಹಿಂಪಡೆಯುತ್ತೇವೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೇಳಿಕೆಗೆ ಮಾಜಿ ಸಚಿವ ಸಿ.ಟಿ. ರವಿ ಟಕ್ಕರ್ ಕೊಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಯುನಿಫಾರಂಗೆ ಹಿಜಾಬ್ ಜೋಡಿಸುತ್ತಾರೋ? ಅಥವಾ ಕಡ್ಡಾಯ ಅನ್ನೋದು ತಗೀತಾರೋ? ಎಂದು ಕುಟುಕಿದ್ದಾರೆ.
ರಾಜ್ಯದಲ್ಲಿ ಹಿಜಬ್ ನಿಷೇಧ ಮಾಡಿರಲಿಲ್ಲ. ಶಾಲೆಗಳಲ್ಲಿ ಯೂನಿಫಾರಂ ಕಡ್ಡಾಯ ಮಾಡಿತ್ತು. ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ನಿಷೇಧ ಆಗಿರಲಿಲ್ಲ. ಕೇವಲ ಶಾಲಾ-ಕಾಲೇಜುಗಳಲ್ಲಿ 1964 ಶಿಕ್ಷಣ ಕಾಯ್ದೆ ಪ್ರಕಾರ ಯೂನಿಫಾರಂ ಕಡ್ಡಾಯ ಮಾಡಿತ್ತು. ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸುವ ಸಮವಸ್ತ್ರ ಪಾಲಿಸಬೇಕು ಅಂತ ನಿಯಮವಿತ್ತು. ಎಲ್ಲಾ ಯೂನಿಫಾರಂಗೂ ಹಿಜಾಬ್ ಕಡ್ಡಾಯ ಮಾಡಲು ಹೊರಟಿದ್ದೀರೋ? ಯೂನಿಫಾರಂ ಬೇಡ ಅವರಿಷ್ಟದಂತೆ ಅಂತ ಮಾಡಲು ಹೊರಟಿದ್ದೀರೋ ಸ್ಪಷ್ಟಪಡಿಸಿ ಎಂದು ಛೇಡಿಸಿದ್ದಾರೆ.
ಸಿದ್ದು ಮನಸ್ಸಿಗೆ ಬಡವ-ಬಲ್ಲಿದ ಅಂತಿರಬೇಕು
ಯೂನಿಫಾರಂ ವಿರುದ್ಧ ಇದ್ದೋರ್ದು ಗಲಾಟೆ ಇದ್ದದ್ದು. ಮಕ್ಕಳಿಗೆ ಯೂನಿಫಾರಂ ತಂದ ಉದ್ದೇಶ ಬಡವ-ಬಲ್ಲಿದ ಅಂತ ಬೇಧ ಇರಬಾರದು. ಜಾತಿಯ ಬೇದ ಇರಬಾರದು. ನಾವೆಲ್ಲರೂ ಸಮಾನರು ಎಂಬ ಮಾನಸೀಕತೆಯಲ್ಲಿ ಕಲಿಯಬೇಕು ಎನ್ನುವ ಉದ್ದೇಶದಿಂದ. ಸಿದ್ದರಾಮಯ್ಯ ಮನಸ್ಸಿಗೆ ಬಡವ-ಬಲ್ಲಿದ ಅಂತಿರಬೇಕು. ಈ ಜಾತಿ, ಆ ಜಾತಿ ಅಂತ ಇರಬೇಕು ಎಂದು ಸಿ.ಟಿ. ರವಿ ಹರಿಹಾಯ್ದಿದ್ದಾರೆ.