ಮೈಸೂರು : ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಪ್ರಸ್ತಾವನೆ ವಿಚಾರ ಕುರಿತು ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ನಮ್ಮ ಊರಿನವರೇ ಅಲ್ವಾ? ಅವರೇನು ಹೊರ ದೇಶದವರಾ? ಭೂ ಸುಧಾರಣೆ ಕಾಯ್ದೆ ತಂದವರು, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಿದ್ದು ಟಿಪ್ಪು ಸುಲ್ತಾನ್ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನ ಬಗ್ಗೆ ನಮ್ಮ ತಕಾರರು ಇಲ್ಲ. ಟಿಪ್ಪು ವಿಚಾರದಲ್ಲಿ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭಿಪ್ರಾಯ ಹೇಳೋದು ಅಪರಾಧವಾ? ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ವಾ? ವಿಮಾನ ನಿಲ್ದಾಣ ವಿಚಾರದಲ್ಲಿ ಕ್ಯಾಬಿನೆಟ್ ತೀರ್ಮಾನವಾಗಿದೆ. ಅದನ್ನು ತಿರಸ್ಕರಿಸಲು ಸಾಧ್ಯವಾ? ಹೆಸರು ಇಡುವುದು ಬಿಡುವುದು ಬೇರೆ ವಿಚಾರ. ಆದರೆ, ಟಿಪ್ಪು ಸುಲ್ತಾನ್ ಅವರನ್ನು ದೇಶ ದ್ರೋಹಿ ಅಂತ ಬಿಂಬಿಸುವುದು ಸರಿಯಲ್ಲ ಎಂದು ಕುಟುಕಿದ್ದಾರೆ.
ಆರೋಪಿಗಳೂ ಫೋಟೋ ತೆಗೆಸಿಕೊಂಡಿರ್ತಾರೆ
ಸಂಸತ್ನಲ್ಲಿ ಸ್ಮೋಕ್ ಬಾಂಬ್ ವಿಚಾರವಾಗಿ ಮಾತನಾಡಿದ ಅವರು, ಇದು ಗಂಭೀರವಾದ ರಾಷ್ಟ್ರೀಯ ಭದ್ರತಾ ವಿಚಾರ. ಆರೋಪಿಗಳಿಗೆ ಬೇರೆಯವರು ಪಾಸ್ ಕೊಟ್ಟಿದ್ದರೆ ಮೈಸೂರು ಗತಿ ಏನಾಗುತ್ತಿತ್ತು? ಬೇರೆ ಧರ್ಮದವರು ಲೇಟರ್ ಕೊಟ್ಟಿದ್ದರೆ ಗತಿ ಏನಾಗುತ್ತಿತ್ತು? ಪಾಸ್ ಕೊಟ್ಟಿದ್ದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಒಂದೊಂದು ಬಾರಿ ಗಡಿಪಾರು ಆದವರು, ಕೊಲೆ ಆರೋಪಿಗಳು ನಮ್ಮ ಜೊತೆಯೇ ಫೋಟೋ ತೆಗೆಸಿಕೊಂಡಿರುತ್ತಾರೆ. ಅದನ್ನು ನಾವು ಗಮನಿಸೋಕೆ ಆಗುತ್ತಾ? ಇದು ಅದೇ ರೀತಿ ಅಷ್ಟೆ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.