ವಿಜಯಪುರ : ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಪ್ರತಿ ವರ್ಷ ಗಣಿ ಗ್ರಾಮದ ಸೋಮೇಶ್ವರ ಜಾತ್ರೆ ನಡೆಯುತ್ತದೆ. ಭಕ್ತರು ದೂರದಿಂದ ಓಡೋಡಿ ಬಂದು ಕಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆಯುವುದೇ ಈ ಸೋಮೇಶ್ವರ ಜಾತ್ರೆಯ ವಿಶೇಷ.
ಕೆಲ ಆಚರಣೆಗಳು ನಮ್ಮನ್ನ ಅಚ್ಚರಿಗೊಳಸುತ್ತವೆ. ಇಂಥ ವಿಶೇಷ ಆಚರಣೆಗಳ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ನಡೆಯೋ ವಿಚಿತ್ರ ಆಚರಣೆಯೂ ಒಂದಾಗಿದೆ. ಗಣಿ ಗ್ರಾಮದಲ್ಲಿ ನಡೆಯುವ ಗ್ರಾಮ ದೇವರು ಸೋಮೇಶ್ವರ ದೇವರ ಜಾತ್ರೆಯಲ್ಲಿ ಇಂಥಹ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ದೊಡ್ಡ ಬಂಡೆ ಕಲ್ಲಿಗೆ ಡಿಕ್ಕಿ ಹೊಡೆಯುವ ಭಕ್ತಾದಿಗಳು, ಬೇಡಿದ ಇಷ್ಟಾರ್ಥಗಳು ಇಡೇರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ ಈ ಜಾತ್ರೆ ಬಲು ವಿಚಿತ್ರ. ಇಲ್ಲಿ ಭಕ್ತರು ದೇವರಿಗೆ ನಮಿಸಲು ಓಡೋಡಿ ಬಂದು ಬಂಡೆಗೆ ತಲೆ ಜಜ್ಜಿಕೊಳ್ಳುತ್ತಾರೆ. ಹೀಗೆ ಗ್ರಾಮದ ಬಹುತೇಕರು ವಿಶೇಷ ರೀತಿಯಲ್ಲಿ ದೇವರಿಗೆ ನಮಸ್ಕರಿಸುತ್ತಾರೆ. ಗ್ರಾಮದ ನೂರಾರು ಜನರಿಂದ ನಡೆಯುವ ಈ ವಿಚಿತ್ರ ಜಾತ್ರೆಯಲ್ಲಿ ದೇವರಿಗೆ ಸಮಸ್ಕಾರ ಮಾಡುವ ರೀತಿಯೆ ಎಲ್ಲರನ್ನ ಅಚ್ಚರಿಗೊಳಿಸುತ್ತೆ.
ತಲೆ ಜಜ್ಜಿಕೊಂಡೆ ನಮಸ್ಕರಿಸಬೇಕು
ಸಾಧಾರಣವಾಗಿ ದೇಗುಲಗಳಲ್ಲಿ ನಮಸ್ಕರಿಸುವಾಗ ಬಾಗಿ ನಮಸ್ಕರಿಸುತ್ತೇವೆ, ದೀರ್ಧದಂಡ ನಮಸ್ಕಾರ ಹಾಕ್ತೇವೆ. ಸಾಷ್ಟಾಂಗ ನಮಸ್ಕಾರ ಹಾಕ್ತೇವೆ. ಆದ್ರೆ, ಗಣಿ ಗ್ರಾಮದಲ್ಲಿ ಬಂಡೆಗೆ ತಲೆ ಜಜ್ಜಿಕೊಂಡೆ ನಮಸ್ಕರಿಸಬೇಕು. ಅದರಲ್ಲೂ ಮೂರು ಬಾರಿ ಓಡೋಡಿ ಬಂದು ಬಂಡೆಗೆ ತಲೆ ಹೊಡೆದುಕೊಂಡು ನಮಸ್ಕಾರ ಮಾಡಬೇಕಂತೆ. ಹೀಗೆ ಮಾಡಿದ್ರೆ ಒಳಿತಾಗುತ್ತೆ ಎಂಬ ನಂಬಿಕೆ ಇದೆ.
ಮೂರು ಮೂರು ಬಾರಿ ಬಂಡೆಗೆ ಡಿಕ್ಕಿ
ವಿಸ್ಮಯಕಾರಿ ವಿಚಾರ ಎಂದರೆ ಸೋಮೇಶ್ವರ ಜಾತ್ರೆಯಲ್ಲಿ ಓಡೋಡಿ ಬಂದು ಬಂಡೆಗೆ ತಲೆ ಜಜ್ಜಿಕೊಂಡ್ರೆ ಏನು ಆಗೋದಿಲ್ಲ. ಅಂದ್ರೆ ತಲೆಗೆ ಗಾಯ, ತಲೆ ನೋವು ಯಾವುದೇ ಸಮಸ್ಯೆ ಆಗಲ್ಲವಂತೆ. ಇದನ್ನ ಸೋಮೇಶ್ವರ ದೇವರ ಪವಾಡ ಎನ್ನಲಾಗುತ್ತಿದೆ. ಅದೇಷ್ಟೋ ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದ್ದರೂ ಈವರೆಗೆ ಯಾರೊಬ್ಬರಿಗೂ ಸಣ್ಣ ಗಾಯವಾಗಿಲ್ಲ. ಮೂರು ಮೂರು ಬಾರಿ ಬಂಡೆಗೆ ಡಿಕ್ಕಿ ಹೊಡೆದರು ಹನಿ ರಕ್ತ ಸಹ ಕಂಡಿಲ್ಲವಂತೆ. ಸ್ಥಳೀಯರು ಹಾಗೂ ಭಕ್ತರು ಇದೆಲ್ಲ ಸೋಮೇಶ್ವರ ದೇವರ ಪವಾಡ ಅಲ್ಲದೆ ಮತ್ತೇನು ಅಲ್ಲಾ ಎನ್ನುತ್ತಾರೆ. ಇದನ್ನ ಪರೀಕ್ಷಿಸಲು ಹೋದವರಿಗು ಅಚ್ಚರಿ ಮೂಡಿಸಿದೆ.