ವಿಜಯಪುರ : ಸ್ವಪಕ್ಷ ನಾಯಕ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಜಿ ಸಚಿವ ನಿರಾಣಿಗೆ ಬೀದಿ ನಾಯಿ, ಹಂದಿ ಎಂದು ಜರಿದಿದ್ದಾರೆ.
ಕೆಲವೊಂದು ಬೀದಿ ನಾಯಿಗಳ ಬಗ್ಗೆ ನಾನು ಉತ್ತರ ಕೊಡಲ್ಲ. ಹಂದಿಗಳು ಹಾಗೇ ಒದರುತ್ತಾ ಹೋಗುತ್ತವೆ. ಹಂದಿಗಳ ಬಗ್ಗೆ ನೀವೆಲ್ಲಾ ಕೇಳಬೇಡಿ. ಅಲ್ಲಲ್ಲಿ ಕೆಲವೊಂದು ವಿಜಯೇಂದ್ರ ಬಿಟ್ಟಿದ್ದಾನೆ, ಅವು ಮಾತನಾಡುತ್ತವೆ. ನನ್ನ ಬಗ್ಗೆ ವಿರೋಧವಾಗಿ ಮಾತನಾಡಲು ಕೆಲವರನ್ನು ವಿಜಯೇಂದ್ರ ಬಿಟ್ಟಿದ್ದಾನೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ವಿವಾದ ವಿಚಾರವಾಗಿ ಮಾತನಾಡಿ, ವಿಮಾನ ನಿಲ್ದಾಣಕ್ಕೆ ಮೈಸೂರು ಮಹಾರಾಜರ ಹೆಸರು ಇಡಬೇಕು. ಮೈಸೂರು ಮಹಾರಾಜರ ದೂರ ದೃಷ್ಟಿಯಿಂದ ಮೈಸೂರು ಅಭಿವೃದ್ಧಿಯಾಗಿದೆ. ಏಷ್ಯಾದಲ್ಲಿ ಮೊದಲು ವಿದ್ಯುತ್ ಆಗಿದ್ದು ಜಯಚಾಮರಾಜೇಂದ್ರ ಒಡೆಯರ್ ಸಮಯದಲ್ಲಿ ಎಂದು ಹೇಳಿದ್ದಾರೆ.
ಇನ್ನೂ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಯಾಕೆ ಅಭಿವೃದ್ಧಿ ಆಗಲಿಲ್ಲ ಅನ್ನೋದರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಆದಿಲ್‌ಶಾಹಿ, ನಿಜಾಮ್ ಶಾಹಿಗಳಿಂದ ಈ ಭಾಗ ಅಭಿವೃದ್ಧಿ ಆಗಿಲ್ಲ ಎಂದು ಶಾಸಕ ಯತ್ನಾಳ್ ಕುಟುಕಿದ್ದಾರೆ.