Monday, October 28, 2024

ನೂತನ ಸಚಿವರಿಗೆ ಹಂಚಿದ್ದ ಖಾತೆ ಪರಿಷ್ಕರಿಸಿದ ಸಿಎಂ

ನಿನ್ನೆ ತಾನೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದ ಸಿಎಂ ಇಂದು ಮತ್ತೊಂದು ಸುತ್ತಿನ ಖಾತೆ ಪಟ್ಟಿ ಪರಿಷ್ಕರಿಸಿದ್ರು. ಈ ಮೂಲಕ ಹಲವು ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ಮೂವರು ಸಚಿವರಿಗೆ ಹೆಚ್ಚುವರಿ ಖಾತೆ ನಿರ್ವಹಿಸುವ ಹೊಣೆ ನೀಡಿದ್ದಾರೆ.
ಖಾತೆ ಹಂಚಿಕೆ ವೇಳೆ ಅರಣ್ಯ ಇಲಾಖೆ ಕೊಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದ ಬಿ.ಸಿ ಪಾಟೀಲ್ ಗೆ ಕೃಷಿ ಖಾತೆ ನೀಡಿದ್ದಾರೆ. ಪರಿಷ್ಕೃತ ಪಟ್ಟಿ ಪ್ರಕಾರ ಸಚಿವ ಆನಂದ್ ಸಿಂಗ್​ ಅರಣ್ಯ ಇಲಾಖೆ ಜೊತೆಗೆ ಹೆಚ್ಚುವರಿಯಾಗಿ ಜೈವಿಕ ಮತ್ತು ಪರಿಸರ ಇಲಾಖೆ ಹೊಣೆ ನೀಡಲಾಗಿದೆ. ಸಚಿವ ಗೋಪಾಲಯ್ಯ ಅವ್ರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿದರೆ, ಶಿವರಾಮ್ ಹೆಬ್ಬಾರ್​ಗೆ ಕಾರ್ಮಿಕ ಇಲಾಖೆ ಜೊತೆ ಸಕ್ಕರೆ ಇಲಾಖೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಇನ್ನು ಸಚಿವ ಸಿ.ಸಿ ಪಾಟೀಲ್​​​ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜೊತೆಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹೊಣೆ ವಹಿಸಲಾಗಿದೆ. ಇಷ್ಟು ಖಾತೆಗಳನ್ನು ಸಿಎಂ ಬಿಎಸ್​ವೈ ಪರಿಷ್ಕೃತಗೊಳಿಸಿ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿದ್ದಾರೆ. ಸದ್ಯದಲ್ಲೇ ರಾಜ್ಯಪಾಲರ ಅಂಕಿತ ಬಿದ್ದು ಅಧಿಕೃತ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ನಿನ್ನೆ ಖಾತೆ ಹಂಚಿಕೆ ಬಳಿಕ ನೂತನ ಸಚಿವ ಬಿಸಿ ಪಾಟೀಲ್ ಸಿಎಂ ಬಿ.ಎಸ್ ವೈ ಭೇಟಿಯಾಗಿ ಖಾತೆ ಬದಲಿಸಿಕೊಡುವಂತೆ ಒತ್ತಡ ಹೇರಿದ್ದರು. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಿಎಂ ಭೇಟಿ ವೇಳೆ ಬಯಸಿದ್ದು ಪ್ರಬಲ ಖಾತೆ, ಆದರೆ ಅರಣ್ಯ ಖಾತೆ ನೀಡಿರೋದು ಸಮಾಧಾನ ತಂದಿಲ್ಲ ಎಂದು ಸಿಎಂ ಗಮನಕ್ಕೆ ತಂದಿದ್ದರು. ಇಂದು ಬೆಳಗ್ಗೆ ನೂತನ ಸಚಿವ ಆನಂದ್ ಸಿಂಗ್ ಕೂಡ ಸಿಎಂ ಭೇಟಿಯಾಗಿ ಖಾತೆ ಬದಲಿಸುವಂತೆ ಪಟ್ಟು ಹಿಡಿದಿದ್ದರು. ಹೀಗಾಗಿ ನಿನ್ನೆ ಹಂಚಿಕೆಯಾದ ಖಾತೆಗಳನ್ನು ಪರಿಷ್ಕರಿಸಿ ಮತ್ತೊಂದು ಪಟ್ಟಿಯನ್ನು ರಾಜಭವನಕ್ಕೆ ಸಿಎಂ ರವಾನಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವೇಳೆ, ಸಚಿವ ಸ್ಥಾನ ಸಿಗದಿರೋದಕ್ಕೆ ಮೂಲ ಬಿಜೆಪಿ ಸಚಿವಾಕಾಂಕ್ಷಿಗಳ ಅಸಮಾಧಾನ ಗುಟ್ಟಾಗಿ ಉಳಿದಿಲ್ಲ. ಬರುವ ವಿಧಾನ ಮಂಡಲ ಅಧಿವೇಶನದ ಬಳಿಕ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಅಸಮಾಧಾನಗೊಂಡಿರುವ ಮೂಲ ಬಿಜೆಪಿ ಸಚಿವಾಕಾಂಕ್ಷಿಗಳು ಮತ್ತೆ ಸಚಿವ ಸ್ಥಾನಕ್ಕೆ ಲಾಬಿ ಶುರು ಮಾಡಿದ್ದಾರೆ. ಮೂಲ ಬಿಜೆಪಿ ಸಚಿವಾಕಾಂಕ್ಷಿಗಳಲ್ಲಿ ಮಂಚೂಣಿಯಲ್ಲಿರುವ ಕತ್ತಿ, ವರಿಷ್ಟರ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಮೂರು ದಿನ ದೆಹಲಿಯಲ್ಲಿ ವಾಸ್ತವ್ಯ ಹೂಡಲಿರುವ ಉಮೇಶ್ ಕತ್ತಿ, ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ್ದು, ಮುಂದಿನ ಸಂಪುಟ ವಿಸ್ತರಣೆ ವೇಳೆ, ತಮ್ಮನ್ನು ಮಂತ್ರಿ ಮಾಡುವಂತೆ ವರಿಷ್ಟರ ಭೇಟಿ ವೇಳೆ ಚರ್ಚಿಸಲು ನಿರ್ಧರಿಸಿದ್ದಾರೆ.
ಸಂಪುಟ ವಿಸ್ತರಣೆ ಮಾಡಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ರೂ ಸಿಎಂ ಬಿಎಸ್ ವೈ ಗೆ ಮಾತ್ರ ಖಾತೆ ಹಂಚಿಕೆ ಗೊಂದಲ ಕಡಿಮೆ ಆಗಿಲ್ಲ. ಒಟ್ಟಿನಲ್ಲಿ ಬಯಸಿದ ಖಾತೆ ಸಿಕ್ಕಿಲ್ಲ ಎಂದವರಿಗೆ ಖಾತೆ ಪಟ್ಟಿ ಪರಿಷ್ಕೃತಗೊಳಿಸಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ ಸಿಎಂ. ಆದ್ರೆ, ಮತ್ಯಾರು ಏನ್ ಬೇಕು ಅಂತ ಕೇಳ್ತೇರೋ ಅನ್ನೋ ಆತಂಕ ಕೂಡ ಇದ್ದೇ ಇದೆ.

RELATED ARTICLES

Related Articles

TRENDING ARTICLES