ಬೆಳಗಾವಿ : ನಾವು ಹಡುಗರಿದ್ದಾಗ ಬಾಂಬೆ ಬಂತು, ಕಲ್ಕತ್ತಾ ಬಂತು ಅಂತ ಡಬ್ಬ ಬಾರಿಸ್ತಿದ್ರು. ನೀವು ಹಾಗೆಯೇ ಎಲ್ಲಾ ತೋರಿಸಿದ್ರಿ. ಗ್ಯಾರಂಟಿ ಮತ್ತೆ ಕೊಡ್ತೀರಾ ನೀವು? ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, 2024ರ ಬಜೆಟ್ ಅನ್ನು ಸಿದ್ದರಾಮಯ್ಯ ಅವರೇ ಮಂಡಿಸ್ತಾರೆ. ಗ್ಯಾರಂಟಿ ಮತ್ತೆ ಬರುತ್ತೆ ಎಂದು ಸಮಜಾಯಿಷಿ ನೀಡಿದರು.
ಸಿಎಂ ಸಿದ್ದರಾಮಯ್ಯನವರು ಭಾಷಣದಲ್ಲಿ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆಯೇ ಮಾಡಲಿಲ್ಲ. ರೈತರ ಉತ್ಪನ್ನಗಳಿಗೆ ಪ್ರಚಾರವೇ ಆಗಲಿಲ್ಲ. ರೈತರು ಬೆಳೆದ ಬೆಳೆಗೆ ಕೋಲ್ಡ್ ಸ್ಟೋರೇಜ್ ಇಲ್ಲ. ಮೂಲಭೂತ ಸೌಕರ್ಯ, ರಸ್ತೆ ಸಮಸ್ಯೆ ಬಗ್ಗೆ ಚರ್ಚೆಯಾಗಲಿಲ್ಲ. ಮಹಿಳಾ ಕಾಲೇಜು ಕೊರತೆ ಇದೆ. ಸಿಎಂ ಎಲ್ಲೂ ಕೂಡ ಆರ್ಥಿಕ ಬೆಂಬಲ ಬಗ್ಗೆ ಮಾಹಿತಿ ಕೊಡಲಿಲ್ಲ ಎಂದು ಆರ್. ಅಶೋಕ್ ಹರಿಹಾಯ್ದರು.
ಉತ್ತರ ಕರ್ನಾಟಕಕ್ಕೆ ಯಾವ ಕೊಡುಗೆ ನೀಡಿದ್ದೀರಿ?
ಉತ್ತರ ಕರ್ನಾಟಕ ಬಗ್ಗೆ ಮೂರು ದಿನಗಳಿಂದ ಚರ್ಚೆಯಾಯ್ತು. ಆದ್ರೆ, ಉತ್ತರ ಕರ್ನಾಟಕ ಭಾಗದವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಮೊನ್ನೆ ಬರದ ವಿಚಾರವಾಗಿ ಮಾತನಾಡುವಾಗಲೂ ಹೇಳಿದ್ದೆ. ಶ್ವೇತ ಪತ್ರ ಮಂಡನೆ ಮಾಡಿ ಅಂತ. ಆದ್ರೆ, ಈವರೆಗೂ ಮಾಡಿಲ್ಲ. ನಾವು ಎರಡು ಬಾರಿ ಸರ್ಕಾರ ಮಾಡಿದ್ದೆವು, ಅದು ಕಡಿಮೆ ಅವಧಿ ಮಾತ್ರ. ನೀವು ಹತ್ತು, ಹದಿನೆಂಟು ಬಾರಿ ಆಡಳಿತ ಮಾಡಿದ್ದೀರಿ. ಉತ್ತರ ಕರ್ನಾಟಕಕ್ಕೆ ಯಾವ ಕೊಡುಗೆ ನೀಡಿದ್ದೀರಿ? ಎಂದು ಪ್ರಶ್ನಿಸಿದರು.
ಪ್ರತಿ ಎಕರೆಗೆ 25 ಸಾವಿರ ಪರಿಹಾರ ಘೋಷಿಸಿ
ಕಾಂಗ್ರೆಸ್ ನವರಿಗಿಂತ ಹೆಚ್ಚು ನೀರಾವರಿ ಯೋಜನೆ ತಂದಿದ್ದು ನಾವು. ಸಿಎಂ ಸಿದ್ದರಾಮಯ್ಯನವರು ರೈತರ ಎರಡು ಲಕ್ಷ ರೂ.ವರೆಗೆ ಸಾಲ ಮನ್ನಾ ಮಾಡಬೇಕು. ಬರದಿಂದ ಕಂಗೆಟ್ಟ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ರೂಪಾಯಿ ಘೋಷಣೆ ಮಾಡಬೇಕು ಎಂದು ಆರ್. ಅಶೋಕ್ ಆಗ್ರಹಿಸಿದರು.