ಚಿಕ್ಕಬಳ್ಳಾಪುರ : ಖಾಸಗಿ ಬಸ್ಗಳ ಚೆಲ್ಲಾಟಕ್ಕೆ, ಅಮಾಯಕ, ಬಡಪಾಯಿ ಪ್ರಯಾಣಿಕರು ನಿರಂತರವಾಗಿ ನಿರ್ದಾಕ್ಷಿಣ್ಯವಾಗಿ ಸಾವನ್ನಪ್ಪುವಂತಾಗಿದೆ.
ಇದಕ್ಕೆ ಮತ್ತೊಂದು ಸಾಕ್ಷಿಯೆಂಬಂತೆ ಖಾಸಗಿ ಬಸ್ ಚಾಲಕನ ಅತಿವೇಗಕ್ಕೆ ಬಸ್ ಪಲ್ಟಿಯಾಗಿ ಇಬ್ಬರು ಮೃತರಾಗಿ, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಖಾಸಗಿ ಬಸ್ ಗಳ ಹಾವಳಿ ಹೆಚ್ಚಾಗಿದೆ. ಬಡಪಾಯಿ ಪ್ರಯಾಣಿಕರ ಜೀವದ ಜೊತೆ ಇವರ ಚೆಲ್ಲಾಟಕ್ಕೆ ಬ್ರೇಕ್ ಬಿದ್ದಿಲ್ಲ. ಇದಕ್ಕೆ ಮತ್ತೊಂದು ನಿದರ್ಶನ ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಸಮೀಪದ ಕನಿಕಿರಿಗುಟ್ಟದ ಬಳಿ ಸಂಭವಿಸಿದ ಬಸ್ ದುರಂತ.
ಸ್ಥಳದಲ್ಲೇ ಇಬ್ಬರು ಸಾವು, ಹಲವರಿಗೆ ಗಂಭಿರ ಗಾಯ
ಚಿಂತಾಮಣಿಯಿಂದ ಚೇಳೂರು ಪಾತಪಾಳ್ಯ, ಚಾಕವೇಲು ಮುಖಾಂತರ ಬಾಗೇಪಲ್ಲಿ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ಅತಿವೇಗದಿಂದ ತಿರುವಿನಿಂದ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಎಣ್ಣೆ ಏಟಲ್ಲಿ ಬಸ್ ಚಲಾಯಿಸಿದ ಡ್ರೈವರ್
ಚಾಲಕ ಮಧ್ಯಪಾನ ಮಾಡಿ ಬಸ್ ಚಲಾಯಿಸಿದ್ದು ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಏನೇ ಆಗಲಿ ಮುಗ್ದ, ಬಡಪಾಯಿಗಳ ವಿಧಿಯಿಲ್ಲದೆ ಪ್ರಯಾಣಕ್ಕೆ ಖಾಸಗಿ ಬಸ್ ಗಳನ್ನೇ ಅವಲಂಬಿಸಬೇಕಾಗಿರುವುದರಿಂದ ಬಸ್ ಮಾಲೀಕರಿಗೆ ಮೂಗುದಾರ ಹಾಕಬೇಕಾದ ಆರ್ಟಿಓ ಅಧಿಕಾರಿಗಳು ಕೂಡ ಜಾಣ ಮೌನಕ್ಕೆ ಶರಣಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.