ಬೆಳಗಾವಿ : ಬ್ಯಾರೇಜ್ ಗೇಟ್‌ಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರಾವರಿ ಇಲಾಖೆ ಎಇಇ ಸಂಜಯ್ ಮಾಳಗಿ ಪ್ರತಿಕ್ರಿಯೆ ನೀಡಿದ್ದಾರೆ. ಬ್ಯಾರೇಜ್ ಗೇಟ್ ಕಳ್ಳತನವಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು ದಡ್ಡಿ, ಸಲಾಮವಾಡಿ, ಶೆಟ್ಟಿಹಳ್ಳಿ ಭಾಗದಲ್ಲಿ 62 ಬ್ಯಾರೇಜ್ ಗೇಟ್ ಕಳ್ಳತನ ಮಾಡಿದ್ದಾರೆ. ಅದರಂತೆ ಬಸಾಪುರ-ಮಲ್ಲಾಪುರ ಬ್ಯಾರೇಜ್ನ 65 ಗೇಟ್ ಕಳ್ಳತನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕಳ್ಳತನ ಹಿನ್ನೆಲೆ ಬ್ಯಾರೇಜ್ ಗೇಟ್ ಹಾಕಲು ತೊಂದರೆ ಆಗುತ್ತಿದೆ. ಕಳೆದ ಬಾರಿ ಹುಕ್ಕೇರಿ ಮತಕ್ಷೇತ್ರದಲ್ಲಿ ಬ್ಯಾರೇಜ್ ಗೇಟ್ ಕದ್ದಿದ್ದ ಕಳ್ಳರು ಸಿಕ್ಕಿದ್ರು. ಬಾಗಲಕೋಟ ಜಿಲ್ಲೆ ಗುಳೇದಗುಡ್ಡದಲ್ಲಿ ಕಳ್ಳರು ಬಂಧನವಾದ ಮಾಹಿತಿ ಇದೆ. ಅಂಕಲಿ ಪೊಲೀಸ್ ಠಾಣೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಬ್ಯಾರೇಜ್ ಗೇಟ್ ಕಳ್ಳತನ ಮಾಡಿ ಮಾರುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
130 ಬ್ಯಾರೇಜ್ ಗೇಟ್ ಕಳ್ಳತನ
ಒಂದು ಬ್ಯಾರೇಜ್ ಗೇಟ್ ಸುಮಾರು 176 ಕೆಜಿ ಇರುತ್ತೆ. ನಮ್ಮ ವ್ಯಾಪ್ತಿಯಲ್ಲಿ 13 ರಿಂದ 14 ಲಕ್ಷ ಮೌಲ್ಯದ 130 ಬ್ಯಾರೇಜ್ ಗೇಟ್ ಕಳ್ಳತನ ಮಾಡಿದ್ದಾರೆ. ಬ್ಯಾರೇಜ್ ಗೇಟ್ ತೆಗೆದು ಇಟ್ಟಾಗ ಕಳ್ಳತನ ಮಾಡಿದ್ದಾರೆ. ಹತ್ತಿರದ ಮನೆ, ಗದ್ದೆಯಲ್ಲಿ ಗೇಟ್‌ಗಳನ್ನು ಇಟ್ಟಿರುತ್ತೇವೆ. ಪ್ರವಾಹ ಸಂದರ್ಭದಲ್ಲಿ ಗೋದಾಮು ಬಿದ್ದು ಹೋಗಿದೆ. ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಮಿನಿ ಗೋದಾಮು ಸ್ಥಾಪನೆಗೆ ಪ್ರಸ್ತಾವನೆ ಕೊಟ್ಟಿದ್ದೇವೆ. ಈ ಮಧ್ಯೆ ಕಳ್ಳರ ಕಾಟದಿಂದಲೂ ತೊಂದರೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.