ಹಾಸನ : ಹಾಸನ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸುಳಿವು ನೀಡಿದ್ದಾರೆ.
ಹೊಳೆನರಸೀಪುರ ತಾಲ್ಲೂಕಿನ ಶ್ರೀರಾಮದೇವರ ಕಟ್ಟೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಿಂದ ಏಕೈಕ ಸದಸ್ಯನಾಗಿ ಪ್ರಜ್ವಲ್ ಆಯ್ಕೆಯಾಗಿದ್ದ. ಪ್ರಜ್ವಲ್ ಸಿಟಿಂಗ್ ಎಂಪಿ ಇದ್ದಾರೆ ಎನ್ನುವ ಮೂಲಕ ಪ್ರಜ್ವಲ್ ರೇವಣ್ಣಗೆ ಮತ್ತೆ ಅವಕಾಶ ಕಲ್ಪಿಸುವ ಮಾತುಗಳನ್ನಾಡಿದ್ದಾರೆ.
ಈ ಜಿಲ್ಲೆಯಲ್ಲಿ ಯಾವುದೇ ವ್ಯತ್ಯಾಸಗಳಿದ್ದರೂ ಅದನ್ನ ಮರೆಯಬೇಕು. ಮಾರ್ಚ್ ತಿಂಗಳ ವೇಳೆಗೆ ಚುನಾವಣೆ ನಡೆಯಬಹುದು. ಇನ್ನೂ ಕೇವಲ ಮೂರೇ ತಿಂಗಳು ಬಾಕಿ ಇದೆ. ಎಲ್ಲರೂ ಕೂಡ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬಿಜೆಪಿ ಜೊತೆ ಒಗ್ಗಟ್ಟಾಗಿ ಕೆಲಸ ಮಾಡಿ ಜಿಲ್ಲೆಯ ಕೀರ್ತಿ ಹೆಚ್ಚಿಸೋಣ ಎಂದು ಕಾರ್ಯಕರ್ತರಿಗೆ ಹೆಚ್ಡಿಡಿ ಕರೆ ನೀಡಿದ್ದಾರೆ.
ಸಮೀಕ್ಷೆ ಲೋಕಸಭೆ ಮೇಲೆ ಪ್ರಭಾವ ಬೀರಲ್ಲ
ನಾವು ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ವಿರುದ್ಧ ಹೋರಾಡಲು ತೀರ್ಮಾನಿಸಿದ್ದೇವೆ. ಅದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಪಂಚ ರಾಜ್ಯ ಚುನಾವಣೆಯ ಎಕ್ಸಿಟ್ ಪೋಲ್ ರಿಪೋರ್ಟ್ ಬಂದಿದೆ. ಒಂದೆರಡು ಕಡೆ ಕಾಂಗ್ರೆಸ್ ಒಂದೆರಡು ಕಡೆ ಬಿಜೆಪಿ ಬರುವ ಸಮೀಕ್ಷೆ ನೀಡಿದ್ದಾರೆ. ಈ ಸಮೀಕ್ಷೆ ಲೋಕಸಭೆ ಮೇಲೆ ಪ್ರಭಾವ ಬೀರುವುದಿಲ್ಲ. ಈ ರಿಸಲ್ಟ್ ಗೌಣ ಅಲ್ಲ ಎಂದು ದೇವೇಗೌಡ್ರು ಅಭಿಪ್ರಾಯಪಟ್ಟಿದ್ದಾರೆ.