ವಿಜಯಪುರ: ಪಂಚರಾಜ್ಯ ಚುನಾವಣೆಯಲ್ಲಿ ಐದು ರಾಜ್ಯಗಳ ಪೈಕಿ ಕನಿಷ್ಠ ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಪಂಚ ರಾಜ್ಯ ಚುನಾವಣೆ ವಿಚಾರದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗುತ್ತಾ? ಎಂಬ ಮಾಧ್ಯಮದವರ ಪ್ರಶ್ನೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಮೋದಿ ವರ್ಚಸ್ಸು ಕಡಿಮೆಯಾಗುತ್ತಿದೆ ಎಂದು ನೀವೇ ಒಪ್ಪಿದ್ದೀರಲ್ಲ ಎಂದರು .
ನಮ್ಮ ಪಕ್ಷ ನಾಲ್ಕನೇ ಕಡೆಯೂ ಅಧಿಕಾರ ಹಿಡಿಯೋ ಸಾಧ್ಯತೆ ಇದೆ. ಎಕ್ಸಿಟ್ ಪೋಲ್ ನೋಡಿ ಗೊತ್ತಾಗುತ್ತದೆ ಎಂದು ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ಅಕ್ಷಮ್ಯ: ಮೈಸೂರು ಹಾಗೂ ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಮಕ್ಕಳ ಮಾರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇದು ಅತ್ಯಂತ ಅಕ್ಷಮ್ಯ ಹಾಗೂ ಹೀನಾಯ ಕೆಲಸ. ಇದನ್ನು ವೈದ್ಯರು ಕೂಡಾ ಶಾಮೀಲಾಗಿ ಮಾಡುತ್ತಿರುವುದು ಅಪರಾಧ. ಯಾವುದೇ ಸರ್ಕಾರವಿದ್ದರೂ ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಇಂಥ ಕೆಲಸ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದನ್ನು ತಡೆಗಟ್ಟಲು ಸರ್ಕಾರ ಬದ್ಧ. ಯಾರೇ ಹೆಣ್ಣು ಭ್ರೂಣ ಹತ್ಯೆ ಮಾಡಿದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಹೇಳಿದರು.