ಶಿವಮೊಗ್ಗ : ರಾಜ್ಯಾಧ್ಯಕ್ಷ ಆಗ್ತೀನಿ ಅಂತಾ ನಾನು ಕೂಡ ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಫೋನ್ ಮಾಡಿ ಹೇಳಿದ್ರು. ನನಗೆ ಆಗ ಗಾಬರಿಯಾಯಿತು, ಸಂತೋಷ ಆಯಿತು. ಆಗ ನಮ್ಮ ತಂದೆಯ ಕಣ್ಣಲ್ಲಿ ಆನಂದ ಭಾಷ್ಪ ನೋಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರು ಒಂದು ದಿನವೂ ಮನೆಯಲ್ಲಿ ಇರಬೇಡ ರಾಜ್ಯ ಸುತ್ತು ಅಂದ್ರು ಎಂದು ತಿಳಿಸಿದರು.
ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇಂತಹ ದರಿದ್ರ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಕ್ಕೆ ಜನರು ಶಾಪ ಹಾಕುತ್ತಿದ್ದಾರೆ. ಕಾಂತರಾಜ್ ವರದಿ ಸ್ವೀಕಾರ ಮಾಡಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಈ ವರದಿ ಸ್ವೀಕಾರ ಮಾಡಬಾರದೆಂದು ಸಹಿ ಸಂಗ್ರಹ ಮಾಡುತ್ತಿದೆ ಎಂದು ಕುಟುಕಿದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು
ಕಾಂತರಾಜ್ ವರದಿ ಎಸಿ ರೂಂ ನಲ್ಲಿ ಕೂತು ಸಿದ್ಧಪಡಿಸಿಲ್ಲ. ಬದಲಾಗಿ ಮನೆ, ಮನೆಗೆ ತೆರಳಿ ವರದಿ ಸಿದ್ಧಪಡಿಸಲಾಗಿದೆ. ಸಿದ್ಧರಾಮಯ್ಯನವರೇ, ರಾಜ್ಯದ ಮುಖ್ಯಮಂತ್ರಿ ಆಗಿ ಬಿ.ಎಸ್. ಯಡಿಯೂರಪ್ಪ ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದಾರೆ. ಹತ್ತಾರು ಸುಳ್ಳುಗಳನ್ನು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಅಭಿವೃದ್ಧಿ ಹರಿಕಾರನನ್ನು ಭಾರಿ ಅಂತರದಿಂದ ಗೆಲ್ಲಿಸೋಣ
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮೂರನೇ ಬಾರಿಗೆ ಪ್ರಧಾನಿಯಾಗಬೇಕು. 28ಕ್ಕೆ 28 ಸ್ಥಾನಗಳನ್ನು ನಾವು ಗೆಲ್ಲುವ ಗುರಿ ಹೊಂದಿದ್ದೇವೆ. ಅಭಿವೃದ್ಧಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಯಡಿಯೂರಪ್ಪರಿಗಿಂತಲೂ ಹತ್ತು ಹೆಜ್ಜೆ ಮಂದೆ ಹೋಗಿದ್ದಾರೆ. ಇಂತಹ ಅಭಿವೃದ್ಧಿ ಹರಿಕಾರನಿಗೆ ಮತ್ತೆ ದಾಖಲೆ ಅಂತರದಲ್ಲಿ ಗೆಲ್ಲಿಸೋಣ. ಈ ಮೂಲಕ ಮತ್ತೆ ನರೇಂದ್ರ ಮೋದಿ ಕೈ ಬಲಪಡಿಸೋಣ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
“ಸಡಗರದ ಸಂಗಮ-
ಸಂಘಟನೆಯ ಸಂಭ್ರಮ”
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಸ್ವೀಕರಿಸಿದ ತರುವಾಯ ಶಿವಮೊಗ್ಗದ ಮೊದಲ ಭೇಟಿಯಲ್ಲಿ ಕಾರ್ಯಕರ್ತರ ಹಾಗೂ ಪಕ್ಷದ ಅಭಿಮಾನಿಗಳ ಅಕ್ಕರೆಯ ಹಾರೈಕೆ ಹಬ್ಬದ ವಾತಾವರಣ ಸೃಷ್ಠಿಸಿದ ಸಂಭ್ರಮಾಚರಣೆಯ ಮೆರವಣಿಗೆ, ಕಾರ್ಯಕರ್ತರ ಮುಗಿಲು ಮುಟ್ಟಿದ ಸಂಭ್ರಮ ಭಾವಪರವಶನನ್ನಾಗಿಸಿತು.
ರಸ್ತೆಯ ಇಕ್ಕೆಲಗಳಲ್ಲೂ… pic.twitter.com/Y1xhQ8rNNL— Vijayendra Yediyurappa (@BYVijayendra) November 29, 2023