ಬೆಂಗಳೂರು: ಆರ್.ಅಶೋಕ್ ವಿಪಕ್ಷದ ನಾಯಕನಾಗಿ ಆಯ್ಕೆಯಾಗಿರುವುದಕ್ಕೆ ಜೋಶ್ ಹೆಚ್ಚಾಗಿದೆ, ಜೋರಾಗಿ ಬಟ್ಟೆ ಒಗೆಯಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳು ಸಿಬಿಐ ತನಿಖೆಗೆ ನೀಡಿದ್ದ ಆದೇಶ ಹಿಂಪಡೆದ ಸರ್ಕಾರದ ನಿರ್ಧಾರದ ಬಗ್ಗೆ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಕುರಿತು ಕೇಳಿದಾಗ ಅವರು ಈ ರೀತಿ ಉತ್ತರಿಸಿದರು.
ನನ್ನ ವಿರುದ್ಧದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ನಂತರ ಅನೇಕರು ಮಾತನಾಡುತ್ತಿದ್ದಾರೆ. ಯಾರ್‍ಯಾರ ಮನಸ್ಸು ಮತ್ತು ನಾಲಿಗೆ ಮೇಲೆ ಏನೇನಿದೆ ಎಂಬುದು ಈಗ ತಿಳಿಯುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
”ತನಿಖೆಗೆ ಅನುಮತಿ ವಾಪಸ್ ಪಡೆದಿರುವ ಬೆಳವಣಿಗೆಯಿಂದ ಎಲ್ಲರ ಮನಸ್ಥಿತಿಯೂ ಅರ್ಥವಾಗುತ್ತಿದೆ. ಯಾರು ಗೆಳೆಯರು, ಅವರ ಭಾವನೆ ಏನಿದೆ ಎಂಬುದು ಈಗ ತಿಳಿಯುತ್ತಿದೆ. ಸಿಬಿಐ ತನಿಖೆಗೆ ಅನುಮತಿ ಹಿಂಪಡೆದಿರುವ ಬಗ್ಗೆ ಈಗ ಮಾತನಾಡಲು ಹೋಗುವುದಿಲ್ಲ. ಮುಂದೆ ಅದರ ಬಗ್ಗೆ ಖಂಡಿತವಾಗಿಯೂ ಮಾತನಾಡುತ್ತೇನೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ” ಎಂದರು.
ಇದನ್ನೂ ಓದಿ: ಕುಡಿಯಲು ಹಣ ಕೊಡದ್ದಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಂದ ಪಾಪಿ ಗಂಡ
ಬೋಗಸ್ ಜನತಾ ದರ್ಶನ, ಸರ್ಕಾರ ಈಗ ಎಚ್ಚರವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ ”ಹೊಸದಾಗಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರಲ್ಲಿ ಜೋಶ್ ಇದೆ. ಹೊಸದರಲ್ಲಿ ಜೋರಾಗಿ ಬಟ್ಟೆ ಒಗೆಯಲಿ. ನಾವು ಎಲ್ಲರ ಮನಸ್ಥಿತಿ ಅರಿಯುತ್ತಿದ್ದೇವೆ” ಎಂದು ಛೇಡಿಸಿದರು.