ವಿಜಯಪುರ: ಕಳೆದ ವಿಧಾನಸಭೆ ಚುನಾವಣೆಯ ವೇಳೆ ಮಾಜಿ ಸಚಿವ ಸೋಮಣ್ಣರನ್ನು ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಕಣಕ್ಕಿಳಿಸಿ ಅವರನ್ನು BJP ಬಲಿಪಶುವನ್ನಾಗಿ ಮಾಡಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕ ಬಳಿಕ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ” ಎಂದರು.
ಸೋಮಣ್ಣಗೆ ಹಿಡಿತವಿಲ್ಲದ ಕ್ಷೇತ್ರ ಚಾಮರಾಜನಗರದಲ್ಲಿ BJP ಮತಗಳೇ ಇರಲಿಲ್ಲ. ಆದರೂ ಅವರನ್ನು ಸೋಲಿಸಬೇಕು ಅನ್ನುವ ಉದ್ದೇಶದಿಂದಲೇ ಅಲ್ಲಿ ನಿಲ್ಲಿಸಲಾಗಿತ್ತು. ಈಗ ಹೊಸ ಅಧ್ಯಕ್ಷರ ಆಯ್ಕೆ ಬಳಿಕ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಹಲವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದರು.
ಇದನ್ನೂ ಓದಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಫೇಸ್ಬುಕ್ ಖಾತೆ ಹ್ಯಾಕ್ : ದೂರು ದಾಖಲು
“ಬಿಜೆಪಿಯಲ್ಲಿ ಅಸಮಾಧಾನ ಹೊಂದಿದ ಸಾಕಷ್ಟು ನಾಯಕರು ಸಿಎಂ, ಡಿಸಿಎಂ, ಸತೀಶ್ ಹಾಗೂ ನನ್ನನ್ನು ಸಂಪರ್ಕಿಸಿದ್ದಾರೆ. ಕಾದು ನೋಡಿ, ಬದಲಾವಣೆಗಳು ಖಚಿತ” ಎಂದು ತಿಳಿಸಿದರು.
ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸಿ, “ಕಾನೂನಿನ ಪ್ರಕಾರವೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಡ್ವೊಕೇಟ್ ಜನರಲ್ ಸಲಹೆ ಪಡೆದು ಅನುಮತಿ ಹಿಂಪಡೆಯಲಾಗಿದೆ. ಹಿಂದಿನ ಬಿಜೆಪಿ ಸಂಪುಟದಲ್ಲಿ ಈ ಬಗ್ಗೆ ಮೊದಲು ಅನುಮೋದನೆ ಪಡೆದಿತ್ತು. ಸಂಪುಟ ಒಪ್ಪಿಗೆ ಬಳಿಕ ಎಜಿ ಅಭಿಪ್ರಾಯ ಪಡೆದಿತ್ತು ಎಂಬ ಆರೋಪವಿದೆ. ಡಿ.ಕೆ ಶಿವಕುಮಾರ್ ವಿರುದ್ಧ ಷಡ್ಯಂತ್ರ ಹಣೆಯಲಾಗಿದೆ ಎಂಬ ಶಂಕೆ ಕೂಡ ಇದೆ. ಹೀಗಾಗಿ ಸಂಪುಟದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯಲಾಗಿದೆ” ಎಂದರು.