ಚಿತ್ರದುರ್ಗ : ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ನೀಡಿ ಪಾಪರ್ ಆಗಿದೆ. ಪಾಪರ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದರು.
ಚಿತ್ರದುರ್ಗದ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದ ತೀರ್ಮಾನ ಅಕ್ರಮ, ಅನ್ಯಾಯ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಕೀಲರಾಗಿದ್ದವರು. ಈ ರೀತಿಯಾಗಿ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಒತ್ತಡದಿಂದಾಗಿ ಒಪ್ಪಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಈ ತೀರ್ಮಾನ ಕ್ಯಾಬಿನೆಟ್ ಗೆ ಕಪ್ಪು ಚುಕ್ಕೆ. ಇಷ್ಟು ವರ್ಷದ ಬಳಿಕ ಸ್ಪೀಕರ್ ಒಪ್ಪಿಗೆ ಪಡೆದಿಲ್ಲ ಎಂಬುದು ತಿಳಿಯಿತೇ? ಈ ಬಗ್ಗೆ ಬಿಜೆಪಿ ಸದನದ ಒಳಗೆ, ಹೊರಗೆ ಹೋರಾಟ ನಡೆಸಲಿದೆ ಎಂದು ಹರಿಹಾಯ್ದರು.
ಶೇ.98ರಷ್ಟು ಅಸಮಾಧಾನ ಇತ್ಯರ್ಥ
ಸಿದ್ಧಗಂಗಾ ಶ್ರೀಗಳ ಬಳಿ ವಿ. ಸೋಮಣ್ಣ ಬೇಸರ ವ್ಯಕ್ತಪಡಿಸಿದ ವಿಚಾರವಾಗಿ ಮಾತನಾಡಿ, ನಾನು ಸಹ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೆನು. ಈಗ ಸಿ.ಟಿ. ರವಿ, ರಮೇಶ ಜಾರಕಿಹೊಳಿ ಅಸಮಾಧಾನ ಸರಿಪಡಿಸಲಾಗಿದೆ. ಶೇ.98ರಷ್ಟು ಅಸಮಾಧಾನ ಸರಿಪಡಿಸಲಾಗಿದೆ, ಶೇ.2ರಷ್ಟು ಬಾಕಿಯಿದೆ. ಸೋಮಣ್ಣ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ಶೇ.2 ಎಷ್ಟು ಬಾಕಿಯಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಪ್ರಶ್ನೆಗಳು ಸಹಜ. ಶೇ.2ರಷ್ಟು ಅಸಮಾಧಾನವನ್ನೂ ಸರಿಪಡಿಸಲಾಗುವುದು ಎಂದು ಆರ್. ಅಶೋಕ್ ಹೇಳಿದರು.