ಬೆಂಗಳೂರು : ರಾಜ್ಯದಲ್ಲಿ ಜಾತಿ ಜನಗಣತಿ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ. ಜಾತಿ ಜನಗಣತಿಯ ಚಂಡು ಸಿಎಂ ಸಿದ್ದರಾಮಯ್ಯ ಅಂಗಳದಲ್ಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದೆ ಸಿಎಂ ಆಗಿದ್ದಾಗ 200 ಕೋಟಿ ಬಿಡುಗಡೆ ಮಾಡಿದ್ದರು. 161 ಕೋಟಿ ಖರ್ಚು ಮಾಡಿ, ಒಂದು ಲಕ್ಷ ಸಿಬ್ಬಂದಿಗಳ ಮೂಲಕ ಜಾತಿ ಜನಗಣತಿ ಮತ್ತು ಶೈಕ್ಷಣಿಕ ಆರ್ಥಿಕ ಜನಗಣತಿ ಮಾಡ್ತಿನಿ ಅಂತ ಹೇಳಿದ್ದರು. ಕಾಂತರಾಜ್ ನೇಮಕ ಮಾಡಿ ಜವಾಬ್ದಾರಿ ಕೊಟ್ಟಿದ್ರು ಎಂದು ತಿಳಿಸಿದರು.
ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ-ಪಂಗಡಗಳಿಗೆ ಸಾಮಾಜಿಕ ನ್ಯಾಯ ಕೊಡ್ತಿವಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಅದರ ವರದಿ ಬಹಿರಂಗಪಡಿಸದಿದ್ರೆ, ಸ್ವೀಕಾರ ಮಾಡದಿದ್ರೆ, 200 ಕೋಟಿಯನ್ನ ಬಿಡುಗಡೆ ಹಾಗೂ 160 ಕೋಟಿ ಖರ್ಚು ಮಾಡಿದ್ದು ಆ ಸಮುದಾಯಕ್ಕೆ ಅನ್ಯಾಯ ಮಾಡಿದಾಗೆ ಅನಿಸುತ್ತೆ. ಅವರ ವರದಿಯಲ್ಲಿ ಆಗಿರುವಂತಹ ಗಣತಿಯ ಸಂದರ್ಭದಲ್ಲಿ ಏನಾದರೂ ಸಮಸ್ಯೆಗಳಾದ್ರೆ ಅಂದಿನ ಸರ್ಕಾರವೇ ಕಾರಣವಾಗುತ್ತೆ ಎಂದು ಕುಟುಕಿದರು.
ಹೇಳಿಕೆ ಕೊಟ್ರೆ ಕೇಸ್ ಹಾಕಿ ಅಂತಿರಾ?
ಇವತ್ತು ಕೈ ಬಿಟ್ರೆ ನಿಮ್ಮ ವಿಶ್ವಾಸಕ್ಕೆ ಧಕ್ಕೆ ಆಗುತ್ತೆ. ಇವತ್ತು ಮೂಲ ಪ್ರತಿ ಇಲ್ಲ ಅಂದ್ರೆ ಯಾರು ಕಾರಣ? ಹೇಳಿಕೆ ಕೊಟ್ರೆ ಪ್ರಕರಣ ದಾಖಲು ಮಾಡಿ ಅಂತ ಹೇಳ್ತಿರಾ? ಯಾರಾದರೂ ಹೇಳಿಕೆ ಕೊಟ್ರೆ ಅವರ ಮೇಲೆ ಕ್ರಮ ಕೈಗೊಳಿ ಅಂತಿರಾ? ಮೂಲ ಪ್ರತಿ ಕಾಣೆಯಾಗಿದ್ರು ಯಾಕೆ ಸುಮ್ಮನಿದ್ದಿರಾ? ನೀವೆ ಬಿಡುಗಡೆ ಮಾಡಿರುವ ಹಣ, ನೀವೆ ರಚನೆ ಮಾಡಿರುವ ಆದೇಶ. ಇದನ್ನು ನಿರ್ವಹಿಸುವ ಜವಾಬ್ದಾರಿ ಸಿದ್ದರಾಮಯ್ಯ ಅವರದ್ದು. ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಏನು ಹೇಳ್ತಾರೆ? ಏನು ನಿರ್ಧಾರ ತೆಗೆದುಕೊಳ್ತಾರೆ? ಎಂಬ ನಂತರ ನಾವು ಪ್ರತಿಕ್ರಿಯೆ ಕೊಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.