ರಾಯಚೂರು: ನಗರದ 9 ಪರೀಕ್ಷಾ ಕೇಂದ್ರಗಳಲ್ಲಿ FDA ದ್ವಿತೀಯ ವೃಂದದ ಪೆರೀಕ್ಷೆ ಭಾನುವಾರ ಸುಸೂತ್ರವಾಗಿ ನಡೆಯಿತು. ಪರೀಕ್ಷಾ ಪ್ರಾಧಿಕಾರ ವಸ್ತ್ರಸಂಹಿತೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಯುವತಿಯರು ಪ್ರವೇಶ ದ್ವಾರದಲ್ಲೇ ಹೈಹಿಲ್ ಚಪ್ಪಲಿ ಕಳೆದರೆ, ಯುವಕರು ಅಂಗಿ ತೋಳು ಕತ್ತರಿಸಿಕೊಂಡು ಪರೀಕ್ಷೆಗೆ ಹಾಜರಾದರು.
ಹಾಲ್‌ಟಿಕೆಟ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿದ್ದರೂ ಕೆಲವರು ಜೀನ್ಸ್, ಉದ್ದ ತೋಳಿನ ಶರ್ಟ್ ಧರಿಸಿ ಬಂದಿದ್ದರು. ಉದ್ದ ತೋಳಿನ ಶರ್ಟ ಹಾಕಿಕೊಂಡು ಬಂದಿದ್ದ ಅಭ್ಯರ್ಥಿಗಳಿಗೆ ಪೊಲೀಸರು ಪ್ರವೇಶ ದ್ವಾರದಲ್ಲಿ ಕತ್ತರಿ ಕೊಟ್ಟು ತೋಳು ಕತ್ತರಿಸಿಕೊಳ್ಳಲು ಸಲಹೆ ನೀಡಿದರು. ಹಾಲ್‌ಟಿಕೆಟ್‌ನಲ್ಲಿಯ ಸೂಚನೆ ನೋಡಿಕೊಳ್ಳದೇ ಬಂದಿದ್ದ ಕೆಲವರು ಅನ್ಯ ಮಾರ್ಗವಿಲ್ಲದೇ ಕತ್ತರಿಯಿಂದ ಅಂಗಿ ತೋಳು ಕತ್ತರಿಸಿ ಪ್ರವೇಶ ದ್ವಾರದಲ್ಲಿ ಬಿಸಾಕಿದರು.
ಇದನ್ನೂ ಓದಿ: ಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ!
ಯುವತಿಯರು ಕಿವಿಯೋಲೆ, ಮೂಗುತಿ, ಕೊರಳಲ್ಲಿನ ಸರ ತೆಗೆದು ಸಂಬಂಧಿಕರ ಕೈಗೆ ಒಪ್ಪಿಸಿದರು. ನಂತರ ಅವರಿಗೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ನೀಡಲಾಯಿತು. ಪೊಲೀಸ್ ಸಿಬ್ಬಂದಿ ಅಭ್ಯರ್ಥಿಗಳ ಕಾಲರ್, ಪ್ಯಾಂಟಿನ ಪಟ್ಟಿ, ಪಾದರಕ್ಷೆ ಪರಿಶೀಲಿಸಿದ ನಂತರ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಕಲ್ಪಿಸಿದರು. ಪಾರದರ್ಶಕವಲ್ಲದ ನೀರಿನ ಬಾಟಲಿಗಳನ್ನು ಒಳಗೆ ಬಿಡಲಿಲ್ಲ.