ಬೆಂಗಳೂರು : ಉಚಿತ ವಿದ್ಯುತ್, 2,000 ಸಾವಿರ ರೂ., 5 ಕೆಜಿ ಹೆಚ್ಚುವರಿ ಅಕ್ಕಿ ಕೊಡುವ ಯೋಜನೆಗಳನ್ನು ಬಡವರಿಗೆ ನೀಡುವುದು ಖರ್ಚು ಮಾಡುವ ಶಕ್ತಿ ಬರಲಿ ಅಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸ್ವಾಮಿ ವಿವೇಕಾನಂದ ಎಜುಕೇಶನಲ್ ಇನ್‌ಸ್ಟಿಟ್ಯೂಟ್ ವಿದ್ಯಾಸಂಸ್ಥೆಯ ರಜತ ಮಹೋತ್ಸವ ಹಾಗೂ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸರ್ಕಾರ ಬಂದ ಮೇಲೆ ಮನೆ ಮನೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಸಾರ್ವತ್ರಿಕ ಮೂಲ ಆದಾಯದ ಆಧಾರದಲ್ಲಿ ಈ ಯೋಜನೆಗಳು ಜಾರಿಯಾಗಿವೆ ಎಂದು ತಿಳಿಸಿದರು.
ಗುರುದೇವೋಭವ ಎಂದು ಕರೆಯಲ್ಪಡುವ ಶಿಕ್ಷಕರು, ರೈತರು ಹಾಗೂ ಸೈನಿಕರನ್ನು ಹೆಚ್ಚು ಗೌರವದಿಂದ ಕಾಣುತ್ತೇವೆ. ತಂದೆ-ತಾಯಿಗಳ ಮೇಲೂ ಶಿಕ್ಷಣ ನೀಡುವ ಹೊಣೆಯಿದೆ. ಇಂಗ್ಲಿಷ್ ಕಲಿಯಬೇಕು. ಆದರೆ, ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತರೆ ಹೆಚ್ಚು ಸುಲಭವಾಗಿ ಅರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
75 ವರ್ಷಗಳಾದರೂ ಶಿಕ್ಷಣ ಪಡೆದಿಲ್ಲ
ನಮ್ಮ ಕ್ಷೇತ್ರದ ಮಕ್ಕಳು ವಿದ್ಯಾವಂತರಾದರೆ ಅದಕ್ಕಿಂತ ಸಂತೋಷ ಬೇರೆ ಯಾವುದೂ ಇಲ್ಲ. 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣ ಕಡ್ಡಾಯ ಹಾಗೂ ಅದು ಮೂಲ ಭೂತ ಹಕ್ಕಾಗಿದೆ. 100ಕ್ಕೆ 100ರಷ್ಟು ಮಕ್ಕಳು ವಿದ್ಯಾವಂತರಾಗಬೇಕು. ದೇಶದಲ್ಲಿ ಕೇವಲ ಶೇ.76 ಮಾತ್ರ ವಿದ್ಯಾವಂತರಿದ್ದಾರೆ . 75 ವರ್ಷಗಳಾದರೂ ಎಲ್ಲರೂ ಶಿಕ್ಷಣ ಪಡೆದಿಲ್ಲ ಎಂದ ಸಿದ್ದರಾಮಯ್ಯ ಬೇಸರಿಸಿದರು.