ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ, ವಿಪಕ್ಷ ಸ್ಥಾನಕ್ಕೆ ಎಷ್ಟು ಫಿಕ್ಸ್ ಆಗಿದೆ? ಎಂದು ಕುಟುಕಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ವಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮಲ್ಲಿ ಪೇಮೆಂಟ್ ಸಂಸ್ಕೃತಿ ಇಲ್ಲ. ಅವರಪ್ಪ ಎಷ್ಟು ಕೋಟಿ ಕೊಟ್ಟು ದೆಹಲಿಗೆ ಹೋಗಿದ್ದಾರೆ? ಬಿಜೆಪಿಯಲ್ಲಿ ಈ ಸಂಸ್ಕೃತಿ ಇಲ್ಲ, ಅವರು ಕೊಟ್ಟಿರಬಹುದು ಎಂದು ಟಾಂಗ್ ಕೊಟ್ಟಿದ್ದಾರೆ.
ಐದಾರು ವಿಚಾರಗಳು ನಮ್ಮ ಮುಂದೆ ಇದೆ. ಕಾವೇರಿ, ಬರಗಾಲ ಸೇರಿದಂತೆ ಹಲವು ವಿಚಾರ ನಮ್ಮ ಮುಂದೆ ಇದೆ. ಎಲ್ಲಾ ಕಾರ್ಯಕರ್ತರು ಹೋರಾಟಕ್ಕೆ ಸಿದ್ದರಾಗಿದ್ದಾರೆ. ಪ್ರತಿಭಟನೆ ಮಾಡೋಣ, ಸರ್ಕಾರದ ಕಿವಿ ಹಿಂಡೋಣ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲುವ ಮೂಲಕ ಮತ್ತೊಮ್ಮೆ ಮೋದಿ ಅವರನ್ನ ಪ್ರಧಾನಿ ಮಾಡೋಣ. ನಮ್ಮದು ಲೀಡರ್ ಪಾರ್ಟಿ ಅಲ್ಲ, ಕಾರ್ಯಕರ್ತರ ಪಕ್ಷ ಎಂದು ಹೇಳಿದ್ದಾರೆ.
ನಮ್ಮ ರಕ್ತದಲ್ಲೇ ಹೋರಾಟ ಇದೆ
ಕೋಮುವಾದ ಬಿತ್ತನೆ ಮಾಡುವ ವ್ಯಕ್ತಿ ಯಾರಾದರೂ ಇದ್ರೆ ಅದು ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್. ನಮ್ಮ ರಕ್ತದಲ್ಲೇ ಹೋರಾಟ ಇದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಆಗಿದೆ. ಟಿಪ್ಪು ಆಡಳಿತ ತರುವ ನಿಟ್ಟಿನಲ್ಲಿ, ಟಿಪ್ಪು ಜಯಂತಿ ಮಾಡಿದ್ರು. ಟಿಪ್ಪು ಸಂಸ್ಕೃತಿ ತರಲು ಹೊರಟಿದ್ರು. ಟಿಪ್ಪು ಒಬ್ಬ ಮತಾಂಧ, ಅವರನ್ನ ಮೆರಸಲು ಹೊರಟಿದ್ದಾರೆ ಸಿದ್ದರಾಮಯ್ಯ. ಇದೆಲ್ಲದರ ವಿರುದ್ಧ ಅಧಿವೇಶನದಲ್ಲಿ ಚರ್ಚೆ ಮಾಡ್ತೀವಿ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.