ಶಿವಮೊಗ್ಗ : ದೂರವಾಣಿಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ, ಮಾಜಿ ಶಾಸಕ ಯತೀಂದ್ರ ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿರುವ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಏನು ಮಾತನಾಡುತ್ತಿದ್ದಾರೆ? ಯಾರಿಗೆ ನಿರ್ದೇಶನ (ಅವಾಜ್) ಕೊಡುತ್ತಿದ್ದಾರೆ ಎನ್ನುವುದು ತಿಳಿದು ಬರಬೇಕಿದೆ ಎಂದು ಹೇಳಿದ್ದಾರೆ.
ತಂದೆ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರದ ಹಕ್ಕಿದೆ. ಆದರೆ, ಪುತ್ರ ಯತೀಂದ್ರ ಸಿದ್ದರಾಮಯ್ಯ ಅದರಲ್ಲಿ ಮೂಗು ತೂರಿಸಿದ್ದಾರೆ. ಈ ಬಗ್ಗೆ ರಾಜ್ಯದ ಜನರಿಗೆ ತಿಳಿಯಬೇಕಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸಿಎಂ ಸಿದ್ದರಾಮಯ್ಯನವರು ಈ ಬಗ್ಗೆ ಸಾರ್ವಜನಿಕರಿಗೆ ಹೇಳಬೇಕು ಎಂದು ಒತ್ತಾಯಿಸಿದ್ದಾರೆ.
40 ಪರ್ಸೆಂಟ್ ಎಂದು ಬೊಬ್ಬೆ ಹೊಡೆದಿದ್ರು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಲ್ಲಿ ರಾಜ್ಯದ ಅಭಿವೃದ್ಧಿಗೆ 6 ಪೈಸೆ ಕೊಟ್ಟಿಲ್ಲ. 6 ತಿಂಗಳಲ್ಲಿ ಇಷ್ಟು ಕೆಟ್ಟ ಸರ್ಕಾರ ಮತ್ತೊಂದು ಇಲ್ಲ. ಬಿಜೆಪಿ ಸರ್ಕಾರವಿದ್ದಾಗ 40 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು. ಆಗ 40 ಪರ್ಸೆಂಟ್ ಸರ್ಕಾರ ಎಂದು ಬೊಬ್ಬೆ ಹೊಡೆದಿದ್ದರು. ಈಗ ಇವರು ಮಾಡುತ್ತಿರುವುದೇನು? 136 ಸೀಟು ಬಂದಿದೆ ಎಂಬ ಕಾರಣಕ್ಕೆ ಏನು ಮಾಡಿದರೂ ನಡೆಯುತ್ತದೆ ಎಂದರೆ ಆಗಲ್ಲ. ಸರ್ಕಾರದಲ್ಲಿ ಆಡಳಿತ ವೈಖರಿಯೇ ಸರಿಯಿಲ್ಲ. ತೀವ್ರವಾದಂತಹ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ತನಿಖಾ ಸಮಿತಿ ರಚನೆಯಾಗಿ ತನಿಖೆ ನಡೆಸಬೇಕು ಎಂದು ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.