ಬೆಳಗಾವಿ : ಕುಂದಾನಗರಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಬರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಆತಿಥ್ಯ ನೀಡಲು ಅನ್ನದಾತರು ಸಜ್ಜಾಗಿದ್ದಾರೆ. ಭೀಕರ ಬರಗಾಲ ಹಿನ್ನೆಲೆಯಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿವೇಶನ ಮುಗಿಯೋವರೆಗೂ ನಮ್ಮ ಮನೆಯಲ್ಲಿ ಇರುವಂತೆ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಕಂಡೂ ಕೇಳರಿಯದ ಬರಗಾಲ ತಾಂಡವವಾಡುತ್ತಿದೆ. ರಾಜ್ಯದ ರೈತರು ಬರ ಪರಿಹಾರ ನೀಡುವಂತೆ ಅಂಗಲಾಚುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕ್ಷೇತ್ರಗಳಿಗೆ ಅನುದಾನ ನೀಡಲು ಸರ್ಕಾರ ಪರದಾಡುತ್ತಿದೆ. ಈ ನಡುವೆ ಬೆಳಗಾವಿಯಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ ತಿಂಗಳಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ.
ಇನ್ನು ಅಧಿವೇಶನಕ್ಕೆ ಬರುವ ಶಾಸಕರು, ಮಂತ್ರಿ ಮಹೋದಯರು ಮತ್ತು ಅಧಿಕಾರ ವರ್ಗ ಉಳಿದುಕೊಳ್ಳಲು, ಊಟ-ಉಪಚಾರಕ್ಕೆ ಕೋಟಿ, ಕೋಟಿ ಖರ್ಚಾಗುತ್ತಿದೆ. ಈ ಆರ್ಥಿಕ ಹೊರೆ ತಗ್ಗಿಸಲು ಬೆಳಗಾವಿ ಜಿಲ್ಲೆಯ ರೈತರು ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಹಿತ, ಸಚಿವರು, ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಹಾಗೂ ಪರಿಷತ್ ಸದಸ್ಯರಿಗೆ ತಮ್ಮ ಮನೆಗಳಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಈ ಮೂಲಕ ರೈತರು ರಾಜಕಾರಣಗಳನ್ನು ಗ್ರಾಮ ವಾಸ್ತವ್ಯಕ್ಕೆ ಆಹ್ವಾನ ಮಾಡಿದ್ದಾರೆ.
ಗ್ರಾಮ ವಾಸ್ತವ್ಯಕ್ಕೆ ಅನ್ನದಾತರ ಆಹ್ವಾನ
ಬೆಳಗಾವಿ ತಾಲೂಕಿನ ಹಲಗಾ, ಬಸ್ತವಾಡ, ಕೊಂಡಸಕೊಪ್ಪ, ಕೋಳಿಕೊಪ್ಪ, ಧಾಮನೆ, ಕೆ.ಕೆ.ಕೊಪ್ಪ., ಮಜಗಾವಿ, ಮಚ್ಛೆ, ಹಿರೇಬಾಗೇವಾಡಿ, ಸಾಂಬ್ರಾ, ಕಾಕತಿ, ಬಸ್ಸಾಪುರ, ಸೇರಿದಂತೆ 25 ಹಳ್ಳಿಗಳ 500ಕ್ಕೂ ಹೆಚ್ಚು ಮನೆಗಳಲ್ಲಿ ಅಧಿವೇಶನಕ್ಕೆ ಬರುವರ ಆತಿಥ್ಯಕ್ಕೆ ರೈತರು ತಯಾರಿ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿಯುತ್ತೆ. ಅದನ್ನು ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ರಾಜಕಾರಣಿಗಳು ಗ್ರಾಮೀಣ ಪ್ರದೇಶದ ಸ್ಥಿತಿಗತಿ, ಸಂಕಷ್ಟ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎನ್ನುತ್ತಿದ್ದಾರೆ.
ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ
ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಟ್ಟಾರೆ, ಸಾಂಪ್ರದಾಯಿಕ ಎನ್ನುವಂತೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸಿದ್ದತೆ ಮಾಡಿಕೊಂಡಿರುವ ರಾಜ್ಯ ಸರ್ಕಾರಕ್ಕೆ ಬೆಳಗಾವಿ ರೈತರು ಗ್ರಾಮ ವಾಸ್ತವ್ಯಕ್ಕೆ ಬಹಿರಂಗ ಆಹ್ವಾನ ನೀಡಿದ್ದಾರೆ. ಇದು ಒಂದು ಒಳ್ಳೆಯ ಕೆಲಸ. ರಾಜಕಾರಣಿಗಳು ಜನಸಾಮಾನ್ಯರ ಸಮಸ್ಯೆ ಆಲಿಸಲು ಸಮಯ ಸಿಗುತ್ತದೆ. ಆದರೆ, ಐಷಾರಾಮಿ ಜೀವನಕ್ಕೆ ಜೋತು ಬಿದ್ದಿರುವ ನಮ್ಮ ರಾಜಕಾರಣಿಗಳು ಈ ಆಹ್ವಾನ ಸ್ವೀಕರಿಸುವುದು ದೂರದ ಮಾತು.