ಶಿವಮೊಗ್ಗ : ಕಳೆದ 40-50 ವರ್ಷಗಳ ಹಿಂದೆ ಬರಗಾಲದ ಕೆಟ್ಟ ಪರಿಸ್ಥಿತಿ ಕೇಳಿದ್ವಿ ಅಂತ ಹಿರಿಯರು ಹೇಳ್ತಾರೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಅಸಮರ್ಪಕವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸೊರಬದಲ್ಲಿ ಬರ ಪ್ರವಾಸ ಮಾಡಲಿದ್ದೇವೆ. ನಾಳೆ ಶಿರಸಿ, ಸಿದ್ದಾಪುರ ಭಾಗದಲ್ಲಿ ಬರ ಅಧ್ಯಯನ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.
ಬರಗಾಲ ಎದುರಿಸುವ ನಿಟ್ಟಿನಲ್ಲಿ ಯಾವುದೇ ಗಂಭೀರತೆ ಸರ್ಕಾರದಲ್ಲಿ ಕಾಣುತ್ತಿಲ್ಲ. ಜನರನ್ನು ಬೇರೆ ಕಡೆ ಎಳೆಯುವ ದಿಕ್ಕಿನಲ್ಲಿ ಗ್ಯಾರಂಟಿ ಕಾರ್ಡ್ಗಳನ್ನು ತರುತ್ತಿದ್ದಾರೆ. ಯಾವ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಬರಗಾಲದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈಗ ವಿದ್ಯುತ್ ಕೊಡುತ್ತೇವೆ ಅಂತಿದ್ದಾರೆ.
ನಿನ್ನೆ ಸಿಎಂ ಸಿದ್ದರಾಮಯ್ಯನವರು 7 ಗಂಟೆ ವಿದ್ಯುತ್ ಕೊಡುತ್ತೇವೆ ಅಂತ ಹೇಳಿದ್ದಾರೆ. ವಿದ್ಯುತ್ ಬೇಕಾಗಿದ್ದುದು ಜೂನ್, ಜುಲೈ ತಿಂಗಳಿನಲ್ಲಿ. ಆಗ ಸರಿಯಾಗಿ ವಿದ್ಯುತ್ ಕೊಡಲಿಲ್ಲ. ಕಾಡುಪ್ರಾಣಿಗಳು ಆಹಾರ, ನೀರು ಅರಿಸಿ ನಗರದೆಡೆಗೆ ಬರುತ್ತಿರೋದನ್ನ ನೋಡಿದ್ದೇವೆ. ಫಸಲು ಬೆಳೆಯುವ ಸಮಯದಲ್ಲಿ ವಿದ್ಯುತ್ ಕೊಡದೆ ಈಗ ವಿದ್ಯುತ್ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದ್ದಾರೆ.