ಬೆಂಗಳೂರು : ಚಿಕ್ಕಬಳ್ಳಾಪುರದಲ್ಲಿ ಝೀಕಾ ವೈರಸ್ ಪತ್ತೆ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನ ಪಿಜಿಗಳ ಮಾಲೀಕರು ಫುಲ್ ಅಲರ್ಟ್ ಆಗಿದ್ದಾರೆ.
ನಗರದಲ್ಲಿ ವೈರಲ್ ಫಿವರ್‌ಗಳು ಹೆಚ್ಚಾಗುತ್ತಿವೆ. ಹೀಗಾಗಿ ಬೇರೆ ಬೇರೆ ಕಡೆಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಿಜಿಗಳಿಗೆ ಬರೋ ಹಿನ್ನೆಲೆ ಸೋಂಕು ತಡೆಗೆ ಪಿಜಿ ಅಸೋಸಿಯೇಷನ್ ಪಣತೊಟ್ಟಿದೆ. ಪಿಜಿಗಳಲ್ಲಿ ಆದಷ್ಟು ಮಾಸ್ಕ್ ಬಳಸುವಂತೆ ಪಿಜಿ ಮಾಲೀಕರಿಗೆ ಪಿಜಿ ಅಸೋಸಿಯೇಷನ್ ಸೂಚಿಸಿದ್ದಾರೆ.
ಇನ್ನು, ಈಗಾಗಲೇ ಬೆಂಗಳೂರಿನ ಪ್ರತಿಯೊಂದು ಪಿಜಿಗಳ ಸ್ವಚ್ಛತಾ ಕಾರ್ಯ ಕೂಡ ಆರಂಭವಾಗಿದ್ದು, ಸೊಳ್ಳೆ ಕಡಿತಾ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರಿಗೂ ಸೊಳ್ಳೆ ಪರದೆ ಒದಗಿಸಲು ಪಿಜಿ ಮಾಲೀಕರಿಗೆ, ಪಿಜಿ ಅಸೋಸಿಯೇಷನ್ ಸೂಚಿಸಿದ್ದಾರೆ.
ಝೀಕಾ ಸೋಂಕಿನ ಲಕ್ಷಣಗಳು
2 ರಿಂದ 7 ದಿನಗಳವರೆಗೆ ಜ್ವರ, ಕಣ್ಣು ಕೆಂಪಾಗುವುದು, ತಲೆನೋವು, ಚರ್ಮದ ಮೇಲೆ ದದ್ದು, ಮೈಕೈ ಹಾಗೂ ಕೀಲು ನೋವು ಝೀಕಾ ಸೋಂಕಿನ ಲಕ್ಷಣಗಳು. ಈ ಲಕ್ಷಣಗಳು ಕಂಡುಬಂದ ಪ್ರಕರಣಗಳಲ್ಲಿ ಸೀರಮ್ (ರಕ್ತ) ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ)ಗೆ ಕಳುಹಿಸಬೇಕು.