ಧಾರವಾಡ : ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಫರ್ ನೀಡಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಿಜೆಪಿಗರಿಗೆ ಟಕ್ಕರ್ ಕೊಟ್ಟಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹತ್ತು ವರ್ಷದಲ್ಲಿ 2,500 ಎಂಎಲ್‌ಗಳನ್ನು ಖರೀದಿ ಮಾಡಿದ್ದಾರೆ. ದುಡ್ಡು ಆಫರ್ ಮಾಡುವುದು ಬಿಜೆಪಿಗೆ ಹೊಸದೇನಲ್ಲ ಎಂದು ಕುಟುಕಿದ್ದಾರೆ.
ಬಿಜೆಪಿ ದುಡ್ಡಿನ ಪಾರ್ಟಿ. ಅವರ ಪಕ್ಷದ ಹಣವೇ 7,500 ಕೋಟಿ ರೂಪಾಯಿ ಇದೆ. ಪಕ್ಷದಿಂದ ಸಂಗ್ರಹ ಆಗಿದ್ದು ಅಷ್ಟಿದೆ? ಕೋವಿಡ್ ಸಮಯದ ಪಿಎಂ ರಿಲೀಫ್ ಫಂಡ್ 30 ಸಾವಿರ ಕೋಟಿ ಆಗಿದೆ. ಅವರು ಗುಜರಾತ್‌ನಲ್ಲಿ ಕ್ರಿಕೆಟ್ ಸ್ಟೇಡಿಯಂ ಕಟ್ಟಿದ್ದಾರೆ. ಆದರೆ, ಅವರಿಗೆ ಒಂದೇ ಒಂದು ಆಸ್ಪತ್ರೆ ಕಟ್ಟಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅವ್ರು ಅಸಮಾಧಾನ ತೋಡಿಕೊಂಡಿದ್ದಾರೆ
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಪಾರ್ಟಿಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮಗೆ ಎಲ್ಲ ಕಡೆಯೂ ಆಹ್ವಾನ ಇರುತ್ತದೆ. ಸತೀಶ್ ಜಾರಕಿಹೊಳಿ ಅಸಮಾಧಾನ ಆಗಿಲ್ಲ. ಅವರೊಬ್ಬ ಒಳ್ಳೆಯ ಮಾನವೀಯ ಗುಣದ ವ್ಯಕ್ತಿ. ಅಂಬೇಡ್ಕರ್ ವಾದ, ಬಸವವಾದ ಇರುವ ನಾಯಕ. ಅವರನ್ನು ಮೂವತ್ತು ವರ್ಷದಿಂದ ನಾನು ನೋಡುತ್ತಾ ಬಂದಿದ್ದೇನೆ. ರಾಜಕೀಯ ಭಿನ್ನಾಭಿಪ್ರಾಯ ಬಹಿರಂಗವಾಗಿ ಹೇಳುವ ವ್ಯಕ್ತಿಯಲ್ಲ. ಅಸಮಾಧಾನ ಬೇರೆ ರೀತಿ ತೋಡಿಕೊಂಡಿದ್ದಾರೆ. ಅದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಇನ್ನೂ ಏನಾದರೂ ಸ್ಪಷ್ಟನೆ ಬೇಕಿದ್ದರೇ ಅವರನ್ನ ಕೇಳಬೇಕು ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ.