ಮಂಡ್ಯ : ಸಿಎಂ ಸಿದ್ದರಾಮಯ್ಯ ಅವರ ನಡೆ ರೈತರಿಗೆ ಬಹಳಷ್ಟು ನೋವು ಉಂಟುಮಾಡಿದೆ. ಜಂಟಿ ಅಧಿವೇಶನದ ಮೂಲಕ ಸುರ್ಗಿವಾಜ್ಞೆ ಜಾರಿಗೆ ತನ್ನಿ. ಹಿಂದಿನ ಒಪ್ಪಂದವನ್ನ ತಿದ್ದುಪಡಿ ಮಾಡಿ, ಸರ್ಕಾರಕ್ಕೆ ಆ ಅವಕಾಶ ಇದೆ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಜನಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಇಂತಹ ಸಂದರ್ಭ ಹಳೆಯ ತೀರ್ಪನ್ನೆ ಗಮನದಲ್ಲಿಟ್ಟುಕೊಂಡು ನೀರು ಬಿಡ್ರಿ ಬಿಡ್ರಿ ಅಂದ್ರೆ ಎಲ್ಲಿಂದ ಬಿಡೋದು. ಈ ಆದೇಶವೇ ಪಕ್ಷಪಾತವಾಗಿದೆ ಎಂಬುದು ಕಂಡು ಬರುತ್ತಿದೆ. ಸರ್ಕಾರದ ಮೇಲೆ ಜವಾಬ್ದಾರಿ ಹೆಚ್ಚಿದೆ. ಅಧಿಕಾರಕ್ಕಿಂತ ಕಾವೇರಿ ಮುಖ್ಯ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬನಿಗೂ ಕುಡಿಯುವ ನೀರಿನ ಹಕ್ಕಿದೆ. ಅದನ್ನ ಮನಗಂಡು ಪ್ರಧಾನಿಗಳು ರಾಷ್ಟ್ರೀಯ ಜಲ ನೀತಿ ಜಾರಿಗೆ ತರಬೇಕು. ರೈತರ ಹೋರಾಟದ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಪ್ರಾಧಿಕಾರದಲ್ಲಿ ಕರ್ನಾಟಕದ ವಾದ ತೀರ ಅವೈಜ್ಞಾನಿಕವಾಗಿದೆ. ಪ್ರಾಧಿಕಾರ ಇದುವರೆಗೂ ಇಲ್ಲಿಗೆ ಬಂದು ಸರ್ವೆ ಮಾಡಿಲ್ಲ. ಪ್ರಾಧಿಕಾರದ ಅಧಿಕಾರಿಗಳು ಮಲತಾಯಿ ಧೋರಣೆ ತೋರುತ್ತಿದ್ದಾರೆ. ನಮ್ಮ ಪ್ರತಿನಿಧಿಗಳು ಸಹ ಸಮರ್ಥ ವಾದ ಮಂಡನೆ ಮಾಡಲು ವಿಫಲವಾಗಿದ್ದಾರೆ ಎಂದು ಬೇಸರಿಸಿದರು.
ರೈತರ ಶಾಪಕ್ಕೆ ಗುರಿಯಾಗುತ್ತೀರಿ
ಕಾವೇರಿ, ಕೃಷ್ಣೆ ಹಾಗೂ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ನೀರಿನ ವಿಚಾರಕ್ಕೆ ನೀವು ರಾಜಕೀಯ ಮಾಡಿದ್ದೇ ಆದಲ್ಲಿ ನೀವು ಕಂಡಿತ ರೈತರ ಶಾಪಕ್ಕೆ ಗುರಿಯಾಗುತ್ತೀರಿ. ಪ್ರಾಮಾಣಿಕ ಹಾಗೂ ಒಗ್ಗಟ್ಟಿನ ಪ್ರದರ್ಶನ ಮಾಡಿ. ಇಲ್ಲವಾದಲ್ಲಿ ರೈತರೇ ನಿಮ್ಮ ಮನೆಬಾಗಿಲ ಮುಂದೆ ಬರಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳಬೇಡಿ ಎಂದು ಜಯಮೃತ್ಯುಂಜಯ ಸ್ವಾಮಿ ತಿಳಿಸಿದರು.
ಕಾವೇರಿ ಕೃಷ್ಣೆ ನಮ್ಮ ಕಣ್ಣುಗಳಿಂದ್ದಂತೆ
ಉತ್ತರ ಕರ್ನಾಟಕದ ಎಲ್ಲಾ ಧಾರ್ಮಿಕ ಮುಖಂಡರ ಪರವಾಗಿ ಇಲ್ಲಿಗೆ ಬಂದಿದ್ದೇನೆ. ಕಾವೇರಿ ಕೃಷ್ಣೆ ನಮ್ಮ ಕಣ್ಣುಗಳಿಂದ್ದಂತೆ. ಕಾವೇರಿ ಋಣ ಲಕ್ಷಾಂತರ ಮಂದಿಯ ಮೇಲೆ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿಲ್ಲ, ಬರಗಾಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ಪ್ರಾಧಿಕಾರದ ಸದಸ್ಯರುಗಳು ಅವೈಜ್ಞಾನಿಕ ತೀರ್ಪುಗಳನ್ನು ನೀಡ್ತಿದ್ದಾರೆ. ಆದೇಶ ಪಾಲನೆಯ ಹೆಸರಿನಲ್ಲಿ ನೀರು ನೀಡ್ತಿರೋದು ದೊಡ್ಡ ತಪ್ಪು ಎಂದು ಹೇಳಿದರು.