ಬೆಂಗಳೂರು : ಹೊಟೇಲ್ನಲ್ಲಿ ಊಟ ತಿಂಡಿಗೆ ರೇಟ್ ಲೀಸ್ಟ್ ಇರುತ್ತೆ. ಆದರೆ, ಈ ಸರ್ಕಾರದಲ್ಲಿ ಚಟ್ನಿ, ಸಾಂಬಾರ್ಗೂ ರೇಟ್ ಲೀಸ್ಟ್ ಮಾಡಿದ್ದಾರೆ. ಈ ಮಾತನ್ನು ಹಿರಿಯರೊಬ್ಬರು ನನಗೆ ಹೇಳಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೆಂಪಣ್ಣನವರು ಐಟಿ ರೈಡ್ ಆದ ಮನೆಗೆ ಹೋಗಿದ್ದರು. ಅಂಬಿಕಾಪತಿ ಯಾಕೆ ಹೋಗಿದ್ರು ಹೇಳಬೇಕು. ಮಾಧ್ಯಮದ ಮುಂದೆ ಹೇಳಿಕೆ ಕೊಡಬೇಕು ಅವರು. ಸಂಘದ ಉಪಾಧ್ಯಕ್ಷ ಅಂಬಿಕಾಪತಿ, ಅದಕ್ಕಾಗಿ ಭೇಟಿ ಮಾಡಿದ್ರು. ಮಾರ್ಗದರ್ಶನ ಪಡೆಯುವುದಕ್ಕೆ ಹೋಗಿದ್ರೋ? ಮಾರ್ಗದರ್ಶನ ಮಾಡುವುದಕ್ಕೋ? ಪ್ರಕರಣ ಮುಚ್ಚಿ ಹಾಕುವ ಯತ್ನ ಇದು ಎಂದು ಕುಟುಕಿದರು.
ಕಾಂಗ್ರೆಸ್ ರಕ್ತದಲ್ಲೇ ಭ್ರಷ್ಟಾಚಾರ, ಲೂಟಿ ಇದೆ
ಪರದೇಕೆ ಪೀಚೆ ಏನೋ ನಡೀತಾ ಇದೆ. ಹೀಗಾಗಿ, ಸಿಬಿಐ ಸುಮೋಟೊ ಕೇಸ್ ದಾಖಲಿಸಿ ತನಿಖೆ ನಡೆಸಬೇಕು. ರಾಜ್ಯದ ಪರಿಸ್ಥಿತಿ ಈ ರೀತಿ ಅದೋಗತಿಗೆ ಬಂತು. ದೇಶದ ಜನ ನಗುವಂತ ಪರಿಸ್ಥಿತಿ ಬಂತು ಎಂಬ ನೋವು ನಮಗಿದೆ. ಹಿಂದೆ ಕೇಂದ್ರದಲ್ಲಿ ಹಗರಣಗಳನ್ನು ಮಾಡಿದ್ರು. ಕಾಂಗ್ರೆಸ್ ಆಡಳಿತ ಮಾಡಿದ್ರೆ ದೇಶ ರಾಜ್ಯ ಉದ್ದಾರ ಆಗಲ್ಲ. ಅದಕ್ಕೆ ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು. ಕರ್ನಾಟಕ ಕಾಂಗ್ರೆಸ್ ಮುಕ್ತವಾಗಿದ್ದರೆ ಇಂತಹ ಸ್ಥಿತಿ ಬರ್ತಾ ಇರಲಿಲ್ಲ. ಕಾಂಗ್ರೆಸ್ ರಕ್ತದಲ್ಲೇ ಭ್ರಷ್ಟಾಚಾರ, ಲೂಟಿ ಇದೆ. ರಾಜ್ಯದ ಜನರಿಗೆ ಅಪಮಾನ, ಅಭಿವೃದ್ಧಿಗೆ ಅನ್ಯಾಯ ಆಗ್ತಿದೆ ಎಂದು ಹರಿಹಾಯ್ದರು.