ಶಿವಮೊಗ್ಗ : ದೌರ್ಜನ್ಯ ಎಸಗಿದ ಅಲ್ಪಸಂಖ್ಯಾತರ ಮೇಲೆ ಕ್ರಮ ಕೈಗೊಂಡಿಲ್ಲ. ಬದಲಾಗಿ ಅಮಾಯಕ ಹಿಂದೂಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಹುಬ್ಬಳ್ಳಿ ಗಲಾಟೆ ಮಾಡಿದ ಕಿಡಿಗೇಡಿಗಳು ಅಮಾಯಕರಂತೆ. ಮುಸಲ್ಮಾನರ ತುಷ್ಠೀಕರಣಕ್ಕಾಗಿ ಹಿಂದೂಗಳ ತಾಳ್ಮೆ ಪರೀಕ್ಷಿಸಬೇಡಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಗುಡುಗಿದರು.
ರಾಗಿಗುಡ್ಡ ಘಟನೆ ಹಾಗೂ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಕಾಂಗ್ರೆಸ್ನ ದಲಿತ ಮುಖಂಡನ ಮನೆ ಮೇಲೆ ಹಲ್ಲೆ ಆಯ್ತು. ಆದರೆ, ಕಾಂಗ್ರೆಸ್ ಆ ಮುಖಂಡನಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ಇಸ್ರೇಲ್ ದಾಳಿ ಬೆಂಬಲಿಸುವ ಕಾಂಗ್ರೆಸ್ ಪಕ್ಷದಿಂದ ಶಾಂತಿ ಬಯಸಲು ಸಾಧ್ಯವೇ? ನಾವಿಲ್ಲಿ ರಾಜಕಾರಣ ಮಾಡಲು ಬಂದಿಲ್ಲ ಎಂದು ಹೇಳಿದರು.
ನಾವು ಶಾಂತಿಯಿಂದಿದ್ದೇವೆ ಅಂದ್ರೆ ದೌರ್ಬಲ್ಯವಲ್ಲ
ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆ ಇಡೀ ರಾಜ್ಯದ ಜನತೆ ನೋಡಿದೆ. ಆ ಸಂದರ್ಭ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ಜನತೆ ಗಮನಿಸಿದೆ. ಹಿಂದೂ ಸಮಾಜ ಶಾಂತಿಯಿಂದಿದೆ ಅಂದ್ರೆ ಅದು ದೌರ್ಬಲ್ಯವಲ್ಲ. ಆ ಸಂದೇಶ ನೀಡಲು ಈ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಶಾಂತಿಯುತ ಗಣೇಶೋತ್ಸವ ನಡೆಯಿತು. ಆದರೆ, ಈದ್ ಮೆರವಣಿಗೆಯಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಯಿತು ಎಂದು ಕಿಡಿಕಾರಿದರು.
ಕಾಂಗ್ರೆಸ್ಸಿಗರನ್ನೂ ಗಡಿಪಾರು ಮಾಡ್ಬೇಕು
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಇದು ಸಣ್ಣ ಘಟನೆ ಅಂತಾರೆ. ಉಸ್ತುವಾರಿ ಸಚಿವರು ಅಸಲಿ ಖಡ್ಗ ಅಂತಾರೆ. ತಪ್ಪಿತಸ್ಥರನ್ನು ಗಡಿಪಾರು ಮಾಡಿದರೆ ಸಾಲದು, ಅವರನ್ನು ರಕ್ಷಿಸುತ್ತಿರುವ ಕಾಂಗ್ರೆಸ್ ಮುಖಂಡರನ್ನೂ ಗಡಿಪಾರು ಮಾಡಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.