ಬೆಂಗಳೂರು : ಏಕದಿನ ವಿಶ್ವಕಪ್-2023 ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧದ ಮುಂದಿನ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಮತ್ತೆ ಆಘಾತ ಎದುರಾಗಿದೆ.
ಜ್ವರದಿಂದ ಬಳಲುತ್ತಿರುವ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಎರಡನೇ ಪಂದ್ಯದಿಂದ ದೂರ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಗಿಲ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಶುಭ್ಮನ್ ಗಿಲ್ ಅವರು 9 ಅಕ್ಟೋಬರ್ (ಇಂದು) 2023ರಂದು ದೆಹಲಿಗೆ ತಂಡದೊಂದಿಗೆ ಪ್ರಯಾಣಿಸುವುದಿಲ್ಲ. ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಅಲಭ್ಯರಾಗಿದ್ದ ಅವರು ಅಫ್ಘಾನಿಸ್ತಾನ ವಿರುದ್ಧದ ಮುಂದಿನ ಪಂದ್ಯದಲ್ಲೂ ಅಲಭ್ಯರಾಗಲಿದ್ದಾರೆ ಎಂದು ಹೇಳಿದ್ದಾರೆ.
ವೈದ್ಯರ ನಿಗಾದಲ್ಲಿ ಗಿಲ್
ಗಿಲ್ ಅವರು ಅಕ್ಟೋಬರ್ 11ರಂದು ದೆಹಲಿಯಲ್ಲಿ ಹಾಗೂ ಮತ್ತೆ ಚೆನ್ನೈನಲ್ಲಿ ಉಳಿದುಕೊಳ್ಳುತ್ತಾರೆ. ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ. ಮುಂದಿನ ಪಂದ್ಯಗಳ ಹಿತದೃಷ್ಟಿಯಿಂದ ಅಘ್ಘಾನಿಸ್ತಾನ ಪಂದ್ಯಕ್ಕೂ ಗಿಲ್ ಅವರು ಅಲಭ್ಯರಾಗಲಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.