ಬೆಂಗಳೂರು : ದಸರಾ ಹಬ್ಬ ಸಮೀಪಿಸುತ್ತಿರುವಾಗಲೇ ಗೃಹಿಣಿಯರಿಗೆ ಬೆಲೆ ಏರಿಕೆಯ ಶಾಕ್ ತಟ್ಟಿದೆ. ಒಂದೇ ವಾರದಲ್ಲಿ ಬೀನ್ಸ್ ದರ ಗಗನಕ್ಕೇರಿದ್ದು, ಕಿಲೋಗೆ 120 ರಿಂದ 135 ರೂ.ವರೆಗೆ ತಲುಪಿದೆ.
ಅದೇ ರೀತಿ ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಮತ್ತಿತರ ಕೆಲವು ಸೊಪ್ಪು, ತರಕಾರಿಗಳ ದರ ದುಬಾರಿಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. 30 ರಿಂದ 40 ರೂ.ಗೆ ಸಿಗುತ್ತಿದ್ದ ಮೂಲಂಗಿ ಇದೇ ಮೊದಲ ಬಾರಿಗೆ 80 ರೂ. ತಲುಪಿದೆ.
ಎರಡು ವಾರಗಳ ಹಿಂದೆ ಕಿಲೋಗೆ 70 ರಿಂದ 80 ರೂ. ಇದ್ದ ಬೀನ್ಸ್ ಇದೀಗ ದುಪ್ಪಟ್ಟಾಗಿದೆ. ಕೊತ್ತಂಬರಿ ಸೊಪ್ಪು ಕೂಡ ಒಂದು ಕಟ್ಟಿಗೆ 25 ರೂ. ಇದ್ದುದು ಎರಡು ಪಟ್ಟು ಏರಿದೆ. ಮೂಲಂಗಿ, ಈರುಳ್ಳಿ ಸೇರಿದಂತೆ ಹಲವು ತರಕಾರಿ ದರವೂ ಏರಿಕೆಯಾಗಿದೆ.
ಈ ಸುದ್ದಿ ಓದಿದ್ದೀರಾ? : ರಾಜ್ಯದಲ್ಲಿ ಮುಂದಿನ 5 ದಿನ ಸಾಧಾರಣ ಮಳೆ
ಎರಡು ತಿಂಗಳ ಹಿಂದೆ ಟೊಮೊಟೋ ಹೆಸರು ಕೇಳಿದ್ರೆ ಭಯ ಪಡುವಂತಿತ್ತು. ಕಿಲೋಗೆ ಬರೋಬ್ಬರಿ 200 ರೂ.ವರೆಗೆ ತಲುಪಿತ್ತು. ಇದೀಗ ಕೇವಲ 10 ರೂ.ಗೆ ಇಳಿಕೆಯಾಗಿದೆ. ಟೊಮೊಟೋ ಬೆಳೆದ ರೈತರು ಬೆಲೆಯಿಲ್ಲದೆ ಕಂಗಾಲಾಗಿದ್ದು, ರಸ್ತೆಗೆ ಸುರಿಯುವಂತಹ ಸ್ಥಿತಿ ಬಂದಿದೆ. ಇತ್ತ ಗ್ರಾಹಕರು ಬೆಲೆ ಇಳಿಕೆಯಿಂದ ನಿರಾಳರಾಗಿದ್ದಾರೆ.