ರಾಮನಗರ : ನಮ್ಮ ಹಳ್ಳಿ ಮಕ್ಕಳಿಗೆ ಬೆಂಗಳೂರಿನ ರೀತಿ ಶಿಕ್ಷಣ ಸಿಗಬೇಕು ಎಂಬುದೇ ನನ್ನ ಕನಸು. ಪಂಚಾಯಿತಿ ಮಟ್ಟದಲ್ಲಿ ಉತ್ತಮ ಶಿಕ್ಷಣ ಸಿಗಬೇಕು. ಜನರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ವಲಸೆ ಹೋಗೊದನ್ನು ಬಿಡಬೇಕು. ಇದು ನಮ್ಮ ಸರ್ಕಾರದ ಚಿಂತನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಕನಸು ನನ್ನ ಆಚಾರ ವಿಚಾರ ಇವತ್ತಿನಿಂದ ಅದಕ್ಕೆ ದೊಡ್ಡ ಅಡಿಪಾಯ ಆಗಿದೆ. ಕರ್ನಾಟಕ ರಾಜ್ಯದಲ್ಲಿ ಬಲಿಷ್ಠ ಸರ್ಕಾರ ರಚನೆ ಮಾಡಲು ನೀವೆಲ್ಲರೂ ಕಾರಣಕರ್ತರಾಗಿದ್ದೀರಿ. ನಾವು ಅಧಿಕಾರಕ್ಕೆ ಬಂದ ನಂತರ ಕೊಟ್ಟ ಮಾತುಗಳನ್ನು ಉಳಿಸಿಕೊಂಡಿದ್ದೇವೆ ಎಂದರು.
ಎಲ್ಲಾ ಗ್ರಾಪಂ ಮಟ್ಟಗಳಲ್ಲಿ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲು ಮುಂದಾಗಿದ್ದೇವೆ. ರಾಜ್ಯದಲ್ಲಿ ಒಟ್ಟು 2 ಸಾವಿರ ಪಬ್ಲಿಕ್ ಶಾಲೆ ನಿರ್ಮಿಸುತ್ತೇವೆ. ಸಿಎಸ್ಆರ್ ಮೂಲಕ ಶಾಲೆ ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ವಲಸೆ ಹೊಗೊದನ್ನು ತಪ್ಪಿಸುವುದೇ ನಮ್ಮ ಗುರಿ. ಜನರು ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದೀರಿ. ಬೆಲೆ ಏರಿಕೆಯಿಂದ ಎಲ್ಲರಿಗೂ ತೊಂದರೆ ಆಗ್ತಿತ್ತು. ಆ ನಿಟ್ಟಿನಲ್ಲಿ ಬಡವರು ಯಾರು ಕರೆಂಟ್ ಬಿಲ್ ಕಟ್ಟಬಾರದು ಎಂದು ಫ್ರೀಯಾಗಿ ಕರೆಂಟ್ ಕೊಟ್ಟಿದ್ದೇವೆ ಎಂದು ಹೇಳಿದರು.
ಭಾಗ್ಯದ ಲಕ್ಷ್ಮಿ ಬಾರಮ್ಮ ರೀತಿ 2,000
ಶಕ್ತಿ ಯೋಜನೆ ಮೂಲಕ ಫ್ರೀಯಾಗಿ ರಾಜ್ಯದ ಮಹಿಳೆಯರು ಬಸ್ನಲ್ಲಿ ಪ್ರಯಾಣ ಮಾಡ್ತಿದ್ದಾರೆ. ಭಾಗ್ಯದ ಲಕ್ಷ್ಮಿ ಬಾರಮ್ಮ ರೀತಿ ಗೃಹಲಕ್ಷ್ಮಿಯರಿಗೆ 2 ಸಾವಿರ ಹಣ ಹಾಕಲಾಗ್ತಿದೆ. ಎಲ್ಲರಿಗೂ ನೇರವಾಗಿ ಹಣ ಹೋಗುವ ರೀತಿ ಕೆಲಸ ಆಗ್ತಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ ಪಬ್ಲಿಕ್ ಶಾಲೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಎಲ್ಲರಿಗೂ ಉತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದೇವೆ. ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.