ಗದಗ : ಕಾಂಗ್ರೆಸ್ ಸರ್ಕಾರ ತಂದಿರುವ ಉಚಿತ ಗ್ಯಾರಂಟಿ ಯೋಜನೆಗಳು ನಮಗೆ ಬೇಡ. ಬದಲಾಗಿ ನಮ್ಮ ಸಾಲ ಮನ್ನಾ ಮಾಡಿ ಎಂದು ರೈತ ಮಹಿಳೆಯರು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಗೊಜನೂರ ಗ್ರಾಮದಲ್ಲಿ ಕೇಂದ್ರ ಬರ ಅಧ್ಯಯನ ತಂಡ ಬರ ಪರಿಶೀಲನೆ ನಡೆಸುತ್ತಿದ್ದಾಗ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ ಇದ್ಯಾವುದು ಸಹ ನಮಗೆ ಬೇಡ ಸರ್.. ಇದರ ಬದಲಾಗಿ ರೈತರ ಸಾಲ ಮನ್ನಾ ಮಾಡಿ ನಮ್ಮನ್ನು ಬದುಕಿಸಬೇಕು ಎಂದು ರೈತ ಮಹಿಳೆಯರು ಒತ್ತಾಯಿಸಿದ್ದಾರೆ.
ಒಂದೇ ಒಂದು ಕಾಳು ಬೆಳೆದಿಲ್ಲ
ಬೆಳೆ ವಿಮಾ ಕಂಪನಿ ವಿಸಿಟ್ ಮಾಡಿಸಿದ್ದೀರಾ? ಒಂದೇ ಒಂದು ಕಾಳು ಬೆಳೆದಿಲ್ಲ. 80% ಇಳುವರಿ ಇದೆ ಅಂತ ಬೆಳೆ ವಿಮಾ ಕಂಪನಿ ಹಾಗೂ ಎಡಿ ರಿಪೋರ್ಟ್ ಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಮುಂದೆ ಮೆಣಸಿನಕಾಯಿ ಬೆಳೆ ಹಾಳಾಗಿರೋದನ್ನು ತೋರಿಸಿ ರೈತರು ಆಕ್ರೋಶ ಹೊರಹಾಕಿದ್ದಾರೆ.