ಬೆಂಗಳೂರು : ರಾಜಧಾನಿಯಲ್ಲಿ ನಾಲ್ಕು ವರ್ಷದ ಬಳಿಕ ನಡೆಸಲಾದ ಸಮೀಕ್ಷೆಯಲ್ಲಿ 2.79 ಲಕ್ಷ ಬೀದಿ ನಾಯಿಗಳಿದ್ದು, 2019ಕ್ಕೆ ಹೋಲಿಸಿದರೆ ಬೀದಿ ನಾಯಿಗಳ ಸಂಖ್ಯೆ ಶೇ.10ರಷ್ಟು ಕಡಿಮೆಯಾಗಿದೆ.
ಬುಧವಾರ ‘ನಿವೇದಿ’ ಸಂಸ್ಥೆ ಸಹಯೋಗದಲ್ಲಿ ಕೈಗೊಂಡ ಬೀದಿ ನಾಯಿಗಳ ಸಮೀಕ್ಷಾ ವರದಿ ಬಿಡುಗಡೆ ಮಾಡಿ ಮಾತನಾಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕಚಂದ್ರ, ಪರಿಣಾಮಕಾರಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ, ಆ್ಯಂಟಿ ರೇಬಿಸ್ ಲಸಿಕೆ ಕಾರ್ಯಕ್ರಮಗಳಿಗೆ ಯೋಜನೆ ರೂಪಿಸಲು ನಡೆಸಲಾದ ಸಮೀಕ್ಷೆಯಲ್ಲಿ ನಗರದಲ್ಲಿ ಒಟ್ಟು 2,79,335 ಬೀದಿ ನಾಯಿಗಳು ಇರುವುದು ಕಂಡು ಬಂದಿದೆ.
ಇದನ್ನೂ ಓದಿ: ಅಮಿತಾಬ್ ಬಚ್ಚನ್ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧ ದೂರು!
ಈ ಪೈಕಿ 1,65,341 ಗಂಡು, 82,757 ಹೆಣ್ಣು ನಾಯಿಗಳಾಗಿದ್ದು, ಈ ಪೈಕಿ 31,230 ಬೀದಿ ನಾಯಿಗಳ ಲಿಂಗ ಪತ್ತೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು. 2019ರಲ್ಲಿ ನಡೆಸಲಾದ ಗಣತಿಯಲ್ಲಿ 3.10 ಲಕ್ಷ ಬೀದಿ ನಾಯಿಗಳು ಪತ್ತೆಯಾಗಿದ್ದವು. ಶೇ.51.16ರಷ್ಟು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಇದೀಗ ಶೇ.71.85 ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು. ಈ ಬಾರಿ ಡ್ರೋನ್ ಬಳಸಿ ನಾಲ್ಕು ಕೆರೆ ಅಂಗಳದಲ್ಲಿ ಬೀದಿ ನಾಯಿಗಳ ಸಮೀಕ್ಷೆಯನ್ನು ಪ್ರಾಯೋಗಿಕವಾಗಿ ನಡೆಸಲಾಗಿದೆ.