ಬೆಂಗಳೂರು : ಕೆಲವರು ನನ್ನ ಬಗ್ಗೆ ಬೇಜವಾಬ್ದಾರಿಯಾಗಿ ಮಾತನಾಡುತ್ತಾರೆ. ಅವರ ಹಾಗೆ ನಾನು ಮಾತನಾಡಲ್ಲ. ನನಗೆ ಅವರಗಿಂತ ಜವಾಬ್ದಾರಿ ಹೆಚ್ಚಿದೆ. ಜವಾಬ್ದಾರಿಯುತ ಸಚಿವನಾಗಿ ನಾನು ಮಾತನಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಂದ್ ಎಲ್ಲ ಮುಗಿಯಲಿ, ನಾವು ಚರ್ಚೆ ಮಾಡುತ್ತಿದ್ದೇವೆ. ಕಾವೇರಿ ವಿಚಾರದಲ್ಲಿ ಸಂಕಷ್ಟ ಸೂತ್ರ ಹೆಣೆಯುವ ಬಗ್ಗೆ ಮಾತನಾಡುತ್ತಿದ್ದೇವೆ. ಇವತ್ತು ಇದೆ ವಿಚಾರವಾಗಿ ಕಾನೂನು ತಜ್ಞರ ಜೊತೆ ಸಭೆ ನಡೆಯಲಿ. ಸಂಕಷ್ಟ ಸೂತ್ರ ನಾವು ರೆಡಿ ಮಾಡಿಕೊಳ್ಳುತ್ತೇವೆ. ಆ ಬಳಿಕ ಕೋರ್ಟ್ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.
ಇವತ್ತು ಕಾವೇರಿ ಬಂದ್ ಅವಶ್ಯಕತೆ ಇರಲಿಲ್ಲ. ಆದರೂ, ಶಾಂತಿಯೂತವಾಗಿ ಪ್ರತಿಭಟನೆ ಮಾಡ್ತಾ ಇದ್ದಾರೆ. ರಾಜ್ಯದ ಜನತೆ ರಕ್ಷಣೆ ಮಾಡಲು ಪೊಲೀಸ್ ಭದ್ರತೆ ಹೆಚ್ಚಿಸಿದ್ದೇವೆ. ಅಂಗಡಿಗಳು ಓಪನ್ ಆಗಿದ್ದಾವೆ. ವಾಹನಗಳು ಎಂದಿನಂತೆ ಓಡಾಡುತ್ತಿವೆ. ಶಾಂತಿಯುತ ಬಂದ್ ನಡೀತಾ ಇದೆ. ರಾಜ್ಯದ ಪರವಾಗಿ ಅಧಿಕಾರಿಗಳು ಭಾಗಿಯಾಗ್ತಾರೆ. ಇದಾದ ಬಳಿಕ ಕಾನೂನು ತಜ್ಞರ ಜೊತೆ ಸಿಎಂ ಸಭೆ ಕರೆದಿದ್ದಾರೆ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ಯಾರೆಲ್ಲ ವಾದ ಮಂಡಿಸಿದ್ದಾರೆ ಅವರೆಲ್ಲ ಭಾಗಿಯಾಗುತ್ತಾರೆ. ಇವತ್ತಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.