Friday, November 22, 2024

ನಮ್ಮ ನಾಡಿನ ರೈತರ ಹಿತ ಕಾಪಾಡಲು ಯಾವತ್ತೂ ಹಿಂದೆ ಬೀಳುವುದಿಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು: ಪಶುಸಂಗೋಪನೆ, ಗೋ ಸಂಪತ್ತು ಹೆಚ್ಚಿದಷ್ಟೂ ನಾಡಿನ ಸಂಪತ್ತು ಹೆಚ್ಚಿ ನಾಡಿನ ಆರ್ಥಿಕತೆಯೂ ಪ್ರಗತಿ ಕಾಣುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸರ್ಕಾರಿ ಉತ್ತನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಪಶುಸಖಿಯರ ತರಬೇತಿ ಕಾರ್ಯಕ್ರಮ, ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ನೂತನ ಪಶು ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಹಾಲು ಉತ್ಪಾದಕರು ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕ ಹರಿವಿಗೆ ಕಾರಣರಾಗಿದ್ದಾರೆ. ಹಾಲು ಒಕ್ಕೂಟಗಳು ರಚನೆಯಾಗಿದ್ದೇ ರೈತರ, ಹಾಲು ಉತ್ಪಾದಕರ ಶೋಷಣೆ ತಪ್ಪಿಸುವುದಕ್ಕಾಗಿ. ಕೆಎಂಎಫ್ ಮತ್ತು ಡೈರಿಗಳಲ್ಲಿ ಅಧಿಕಾರಿಗಳ ಏಕಸ್ವಾಮ್ಯ ತಪ್ಪಿಸಲು ಹಾಲು ಒಕ್ಕೂಟಗಳಿಗೆ ಶಕ್ತಿ ತುಂಬುವ ಕೆಲಸವನ್ನು ನಾನು ಪಶುಸಂಗೋಪನಾ ಸಚಿವನಾಗಿ ಮಾಡಿದ್ದೆ ಎಂದು ಸ್ಮರಿಸಿದರು.

ರಾಜ್ಯದಲ್ಲಿ ಹಾಲಿನ ಉತ್ಪಾದನೆ ಇನ್ನಷ್ಟು ಹೆಚ್ಚಿಸಲು ಮತ್ತು ಅದನ್ನು ಮಾರಾಟ ಮಾಡುವುದಕ್ಕೂ ಸಾಕಷ್ಟು ಅವಕಾಶಗಳಿವೆ. ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿತ್ತು. ಆಗ ನಾನು ಕ್ಷೀರಭಾಗ್ಯ ಕಾರ್ಯಕ್ರಮವನ್ನು ಜಾರಿಗೆ ತಂದು ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ಜತೆಗೆ ರೈತರಿಗೆ ಪ್ರತಿ ಲೀಟರ್ ಗೆ 5ರೂ ಪ್ರೋತ್ಸಾಹದನದ ಮೂಲಕ ಅನುಕೂಲ ಆಗುವ ಕಾರ್ಯಕ್ರಮವನ್ನು ರೂಪಿಸಿದ್ದೆ ಎಂದು ವಿವರಿಸಿದರು.

ನಾನು ಈ ಹಿಂದೆ ಪಶುಸಂಗೋಪನಾ ಸಚಿವನಾಗಿ ಮಾಡಿದ ಒಳ್ಳೆಯ ಕೆಲಸಗಳು ನನ್ನನ್ನು ಎರಡು ಬಾರಿ ಮುಖ್ಯಮಂತ್ರಿ ಆಗುವವರೆಗೂ ಕೈಹಿಡಿದಿವೆ. 14 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ನನ್ನನ್ನು ಚಾಮುಂಡೇಶ್ವರಿ, ವರುಣ ಮತ್ತು ಬಾದಾಮಿಯ ಮತದಾರರು 9 ಬಾರಿ ಗೆಲ್ಲಿದ್ದಾರೆ. ಪ್ರಜಾಪ್ರಭುತ್ವಕ್ಕೆ ಜನರೇ ನಿಜವಾದ ಮಾಲೀಕರು ಎಂದು ಕೃತಜ್ಞತೆ ಸಲ್ಲಿಸಿದರು.

ಹಸು, ಎಮ್ಮೆ, ಕುರಿ, ಮೇಕೆ ತಳಿಗಳ ಉಳಿಸುವ ಮತ್ತು ಅಭಿವೃದ್ಧಿ ಪಡಿಸುವ ಹೊಣೆಗಾರಿಕೆಯನ್ನು ಪಶುಸಂಗೋಪನಾ ಇಲಾಖೆ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತರು ಮಾಡುತ್ತಿರುವ ಉತ್ತಮ ಕಾರ್ಯವನ್ನೇ ಪಶು ಇಲಾಖೆಯಲ್ಲಿ ಪಶುಸಖಿಯರು ನಿರ್ವಹಿಸುತ್ತಾರೆ. ಇವರು ಪಶುಪಾಲಕರು, ರೈತರು ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಾರೆ ಎಂದು ಮೆಚ್ಚುಗೆ ಸೂಚಿಸಿದರು.

ಸರ್ಕಾರ ರೈತರಿಗೆ, ಪಶುಪಾಲಕರಿಗೆ, ಕುರಿ, ಕೋಳಿ ಸಾಕಾಣಿಕೆದಾರರಿಗೆ ಹಲವು ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ನೀಡಿದೆ. ಇವೆಲ್ಲವನ್ನೂ ರೈತರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಸಿ.ಮಹದೇವಪ್ಪ ಅವರು ಅಧ್ಯಕತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿಲ್ಲೆಯ ಶಾಸಕರುಗಳಾದ ಸಿ.ಅನಿಲ್ ಕುಮಾರ್, ಡಿ.ರವಿಶಂಕರ್, ಕೆ.ಹರೀಶ್ ಗೌಡ, ದರ್ಶನ್ ದ್ರುವನಾರಾಯಣ್, ಜಿ.ಡಿ.ಹರೀಶ್ ಗೌಡ ಮತ್ತು ವಿಧಾನ ಪರಿಷತ್ ಸದಸ್ಯರುಗಳಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮರಿತಿಬ್ಬೇಗೌಡ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES