ಬೆಂಗಳೂರು : ಕಾವೇರಿ ನದಿ ನೀರು ವಿವಾದ ಸಂಬಂಧ ಇಂದು ನಡೆದ ಸಭೆಯಲ್ಲಿ ಕರ್ನಾಟಕಕ್ಕೆ ಭಾರಿ ಹಿನ್ನಡೆಯಾಗಿದೆ.
ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರದ ಸಭೆ ಮುಕ್ತಾಯವಾಗಿದ್ದು, ದಿನಕ್ಕೆ 3,000 ಕ್ಯೂಸೆಸ್ ನಂತೆ ಮುಂದಿನ 18 ದಿನಗಳ ಕಾಲ ಕಾವೇರಿ ನೀರು ಹರಿಸುವಂತೆ ಶಿಫಾರಸು ಮಾಡಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ವಿರುದ್ಧ ಬೆಂಗಳೂರಿನಲ್ಲಿ ಬಂದ್ ನಡೆಯುತ್ತಿರುವುದರ ಮಧ್ಯೆಯೇ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.
ಆಗಸ್ಟ್ 28ರಂದು ನಡೆದಿದ್ದ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರದ ಸಭೆಯಲ್ಲಿ ದಿನಕ್ಕೆ 5,000 ಕ್ಯೂಸೆಸ್ ನಂತೆ 15 ದಿನಗಳ ಕಾಲ ಕಾವೇರಿ ನೀರು ಹರಿಸುವಂತೆ ಶಿಫಾರಸ್ಸು ನೀಡಲಾಗಿತ್ತು. ಇದೀಗ ಮತ್ತೆ ಸೆಪ್ಟಂಬರ್ 28ರಿಂದ ಅಕ್ಟೋಬರ್ 15ರವರೆಗೆ ನೀರು ಬಿಡುವಂತೆ ಸೂಚಿಸಲಾಗಿದೆ.
53% ಮಳೆ ಕೊರತೆ ಆಗಿದೆ
ಕಾವೇರಿ ಕೊಳ್ಳದಲ್ಲಿ 53% ಮಳೆ ಕೊರತೆ ಆಗಿದೆ. ರಾಜ್ಯದ 161 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಆಗಿದೆ. 34 ತಾಲೂಕುಗಳು ಭಾಗಶಃ ಬರಕ್ಕೆ ತುತ್ತಾಗಿವೆ. ಸದ್ಯ ರಾಜ್ಯದ ಜಲಾಶಯಗಳಲ್ಲೇ ನೀರಿಲ್ಲ. ಈ ಪರಿಸ್ಥಿತಿಯಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂದು CWRC ಸಭೆಯಲ್ಲಿ ಕರ್ನಾಟಕ ಅಧಿಕಾರಿಗಳ ವಾದ ಮಂಡಿಸಿದ್ದರು.