ಬೆಂಗಳೂರು : ಈಗ ಈ ಸರ್ಕಾರ ಜನ ಹಿತವನ್ನು ಸಂಪೂರ್ಣ ಮರೆತಿದೆ. ನೀರು ಕೊಡಿ ಅಂತ ಹೋರಾಟ ಮಾಡ್ತಿದ್ರೆ, ಸಾರಾಯಿ ಅಂಗಡಿ ಕೊಡ್ತಿದ್ದಾರೆ. ಸಾರಾಯಿ ಅಂಗಡಿ ತೆರೆಯೋದು ಅಕ್ಷಮ್ಯ ಅಪರಾಧ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ಕೊಡೋದು ಬಿಟ್ಟು ಸಾರಾಯಿ ಕುಡಿಸ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ತಕ್ಷಣ ಸಾರಾಯಿ ಅಂಗಡಿ ತೆರೆಯೋದನ್ನು ನಿಲ್ಲಿಸಬೇಕು ಅಂತ ಆಗ್ರಹ ಮಾಡ್ತೀನಿ ಎಂದರು.
ನಾಡಿದ್ದು ವಿಧಾನಸೌಧದ ಎದುರು ಬಿಜೆಪಿ ಸತ್ಯಾಗ್ರಹ ಮಾಡಲಿದೆ. ಗಾಂಧಿ ಪ್ರತಿಮೆ ಎದುರು ಶಾಸಕರು, ಪರಿಷತ್ ಸದಸ್ಯರಿಂದ ಸತ್ಯಾಗ್ರಹ ನಡೆಯಲಿದೆ. ಜೆಡಿಎಸ್ ಹಾಗೂ ಬಿಜೆಪಿ ನಾಯಕರೆಲ್ಲರೂ ಒಟ್ಟಾಗಿ ಇರ್ತೇವೆ. ನಮ್ಮ ಹೋರಾಟಕ್ಕೆ ಜೆಡಿಎಸ್ ನಾಯಕರೂ ಕೈಜೋಡಿಸುವಂತೆ ಮನವಿ ಮಾಡ್ತೇನೆ ಎಂದು ಯಡಿಯೂರಪ್ಪ ಜೆಡಿಎಸ್ ನಾಯಕರ ಬೆಂಬಲ ಕೋರಿದರು.
2 ಸಾವಿರ ಕೊಟ್ಟು 4 ಸಾವಿರ ಪಡೆಯುವ ತಂತ್ರ
ಮಧ್ಯ ಮಾರಾಟ ವಿಚಾರ ಕುರಿತು ಮಾಜಿ ಸಚಿವ ಮುನಿರತ್ನ ಮಾತನಾಡಿ, ಮಾಲ್, ರೇಷನ್ ಅಂಗಡಿ, ಕೊನೆಗೆ ಫುಟ್ ಪಾತ್‌ಗಳಲ್ಲಿ ಎಣ್ಣೆ ಮಾರಾಟ ಮಾಡುವ ಕಾಲ ಬರಲಿದೆ. ಅವರು ಕೊಡುವ 2 ಸಾವಿರ ವಾಪಸ್ ಪಡೆಯುವ ದಾರಿ ಇದು. ಪ್ರತಿಯಾಗಿ ನಾಲ್ಕು ಸಾವಿರ ಪಡೆಯುವ ಪ್ಲಾನ್ ಇದು. ಹಣ ವಾಪಸ್ ಪಡೆಯಲು ಕುಡುಕರನ್ನಾಗಿ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.