ಬೆಂಗಳೂರು : ನಾಳೆಯ ಬಂದ್ಗೆ ಜೆಡಿಎಸ್ ಪಕ್ಷದಿಂದ ಸಂಪೂರ್ಣ ಬೆಂಬಲ ಕೊಡ್ತೀವಿ. ರೈತ ಸಂಘಟನೆ, ಕನ್ನಡ ಸಂಘಟನೆಗಳು ಬಂದ್ಗೆ ಕರೆ ಕೊಟ್ಟಿದ್ದಾರೆ. ಮಂಡ್ಯದಲ್ಲಿ ನಾನೇ ಬೆಂಬಲದ ಬಗ್ಗೆ ಹೇಳಿದ್ದೇನೆ. ನಮ್ಮ ಪಕ್ಷದಿಂದ ಸಹಕಾರ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ನಿಂದ ಯುವಕರು ಆಕ್ರೋಶಕ್ಕೆ ಒಳಗಾಗೋದು ಬೇಡ. ಹಿಂದೆ ಒಂದು ಬಾರಿ ಅನಾಹುತ ಆಗಿತ್ತು. ಶಾಂತಿಯುತವಾಗಿ ಬಂದ್ ಮಾಡಿ. ಕೇಂದ್ರ ಸರ್ಕಾರದ ಕಣ್ಣು ತೆರೆಸಲು, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡಲು ಬಂದ್ ಮಾಡ್ತಾ ಇದ್ದೀರಾ ಮಾಡಲಿ. ನಮ್ಮ ಕಾರ್ಯಕರ್ತರು ಬಂದ್ನಲ್ಲಿ ಭಾಗವಹಿಸುತ್ತಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದ್ ಮಾಡಿ ಎಂದು ಮನವಿ ಮಾಡಿದರು.
ಪ್ರಧಾನಿ ಮೋದಿಗೆ ದೇವೇಗೌಡರು ಪತ್ರ ಬರೆದ ವಿಚಾರವನ್ನು ಸಿದ್ದರಾಮಯ್ಯ ಸ್ವಾಗತ ಮಾಡಿರುವ ವಿಚಾರ ಕುರಿತು ಮಾತನಾಡಿ, ಈ ಸಮಸ್ಯೆ ಹಿಂದೆ ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ಸಮಸ್ಯೆ ಇದೆ. ಸಿದ್ದರಾಮಯ್ಯ ಹೇಳೋದು ಸರಿಯೇ. ಕೋರ್ಟ್ ನಲ್ಲಿ ಈ ವಿಷಯಕ್ಕೆ ತಾರ್ಕಿಕ ಅಂತ್ಯ ಸಾಧ್ಯವಿಲ್ಲ. ಮಾತುಕತೆ ಮೂಲಕ ಹೊಂದಾಣಿಕೆ ಆಗಬೇಕು ಎಂದು ತಿಳಿಸಿದರು.
ಕಾವೇರಿ ಹುಟ್ಟೋದು ಕರ್ನಾಟಕದಲ್ಲಿ
ತಮಿಳುನಾಡಿನಲ್ಲಿ ನೀರು ಸಮುದ್ರಕ್ಕೆ ಹರಿದು ಹೋಗ್ತಿದೆ ಅಂತ ಸಾಮಾನ್ಯ ರೈತರು ಮಾತನಾಡ್ತಿದ್ದಾರೆ. ಸಿಎಂ ಸ್ಟಾಲಿನ್, ಅಲ್ಲಿನ ವಿರೋಧ ಪಕ್ಷಗಳು ಎಲ್ಲರು ಕುಳಿತು ಇದನ್ನ ಸರಿ ಮಾಡಿಕೊಳ್ಳಬೇಕು. ಕಾವೇರಿ ಹುಟ್ಟೋದು ಕರ್ನಾಟಕದಲ್ಲಿ, ಹರಿಯೋದು ತಮಿಳುನಾಡಿಗೆ. ನಮ್ಮ ರೈತರನ್ನು ಬೀದಿಗೆ ತಂದು ನೀರು ಕೊಡಲು ಸಾಧ್ಯವಿಲ್ಲ. ಹೀಗಾಗಿ, ಎರಡು ರಾಜ್ಯಗಳು ಹೊಂದಾಣಿಕೆ ಮಾಡಿಕೊಳ್ಳಬೇಕು. ಇಲ್ಲ ಅಂದ್ರೆ ಮುಂದೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರೇ ಮಧ್ಯಸ್ಥಿಕೆ ವಹಿಸಬೇಕು ಎಂದು ಹೇಳಿದರು.