ಬೆಂಗಳೂರು : ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ವರದಿ ಕೊಡಲಿ ಅಂತ ಉಪರಾಷ್ಟ್ರಪತಿಗೆ ಮನವಿ ಮಾಡಿದ್ದೆ. ಇದಕ್ಕೆ ತಮಿಳರು ವಿರೋಧಿಸಿದ್ರು. ಆಗ ನನ್ನ ಕಣ್ಣಲ್ಲಿ ನೀರು ಸುರಿತಿತ್ತು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ಡ್ಯಾಂ ನೀರಿನ ವಿವರ ಸಂಗ್ರಹಿಸಿ ಪ್ರಧಾನಿ ಮೋದಿಗೆ ಕಳುಹಿಸಿದ್ದೇನೆ. ತಮಿಳರು ಬೇಡ, ಕರ್ನಾಟಕದವರು ಬೇಡ. ಬೇರೆ ಐದು ಜನರನ್ನು ಕಳುಹಿಸಿಕೊಡಿ ಅಂತ ಹೇಳಿದ್ದೇನೆ ಎಂದರು.
ಕುಮಾರಸ್ವಾಮಿ ಅವರು ಡ್ಯಾಂಗೆ ಹೋಗಿ ವೀಕ್ಷಣೆ ಮಾಡಿದ್ದಾರೆ. ಅಲ್ಲಿಂದ ಮಾಹಿತಿ ಸಂಗ್ರಹಣೆ ಮಾಡಿ ನನಗೆ ತಿಳಿಸಿದ್ದಾರೆ. ಪ್ರಧಾನಿಗೆ ಈ ಪತ್ರವನ್ನು ಕಳುಹಿಸಿದ್ದೇನೆ. ಮಂಡ್ಯ, ಮೈಸೂರು ಸೇರಿ ಹಲವು ಕಡೆ ಪ್ರತಿಭಟನೆ ಮಾಡ್ತಿದ್ದಾರೆ. ನಾನು ಕಾಂಗ್ರೆಸ್, ಬಿಜೆಪಿ ವಿಚಾರ ಮಾತಾಡಲ್ಲ. ರಾಜಕೀಯ ನಿರ್ಣಯದ ವಿಚಾರವನ್ನು ಮಾತಾಡಲ್ಲ. ಅದಕ್ಕೆ ಬುಧವಾರ ಸುದ್ದಿಗೋಷ್ಠಿ ಕರೆಯುತ್ತೇನೆ. ಜನ ಸಂಕಷ್ಟಕ್ಕೆ ಈಡಾಗಿರೋ ಬಗ್ಗೆ ಕುಮಾರಸ್ವಾಮಿ ಮಾಹಿತಿ ಸಂಗ್ರಹಿಸಿದ್ದಾರೆ. ನನಗೆ ಹೋಗೋ ಶಕ್ತಿಯಿಲ್ಲ, ಅದಕ್ಕೆ ಕುಮಾರಸ್ವಾಮಿ ಹೋಗಿದ್ದಾರೆ ಎಂದು ಹೇಳಿದರು.
ನಮ್ಮ ಜನರನ್ನು ಉಳಿಸಬೇಕಿದೆ
ಬಂದ್ ಬಗ್ಗೆ ಯಾರ್ಯಾರು ಏನು ಮಾತನಾಡ್ತಿದ್ದಾರೆ ಗೊತ್ತಿದೆ. ನಮ್ಮ ಜನರನ್ನು ಉಳಿಸಬೇಕಿದೆ, ನಮ್ಮ ಜನರನ್ನು ಉಳಿಸಬೇಕಿದೆ. ತಮಿಳುನಾಡಿನ ರಾಜಕೀಯ ಶಕ್ತಿ ಬಳಸಲು ಸಲುವಾಗಿ ಈ ರೀತಿ ಆಗ್ತಿದೆ. ನಮ್ಮಲ್ಲಿ 28 ಇದ್ದಾರೆ. ಅಲ್ಲಿ 40 ಜನ ಇದ್ದಾರೆ ಅಷ್ಟೇ ಎಂದರು. ಕೆಆರ್ಎಸ್ ಡ್ಯಾಂ ನೀರು ಖಾಲಿಯಾಗಿರೋ ಬಗ್ಗೆ ದೇವೇಗೌಡರು ಫೋಟೋ ಪ್ರದರ್ಶಿಸಿದರು. ಈ ಫೋಟೋ ಮತ್ತು ವರದಿಯನ್ನು ಪ್ರಧಾನಿಗೆ ಕಳುಹಿಸಿದ್ದಾರೆ.