ಬೆಂಗಳೂರು : ಬೆಂಗಳೂರು ಬಂದ್ ಮಾಡೋದು ಬೇಡ. ಯಾವ ಲಾಭಕ್ಕಾಗಿ ಬಂದ್ ಮಾಡ್ತಾರೆ? ಸರ್ಕಾರವೇ ಹೋರಾಟಕ್ಕೆ ನಿಂತಿದೆ. ಬಂದ್ ಮಾಡೋದ್ರಿಂದ ಯಾವುದೇ ಅನುಕೂಲ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎಲ್ಲಾ ಭಾಷೆ, ಬೇರೆ ಬೇರೆ ರಾಜ್ಯದ ಜನ ವಾಸವಾಗಿದ್ದಾರೆ. ಬೆಂಗಳೂರು ಮರ್ಯಾದೆಯನ್ನ ಹಾಳುಗೆಡವಬೇಡಿ. ಬೆಂಗಳೂರಿನ ಮರ್ಯಾದೆ ಹಾಳು ಮಾಡಿದರೆ ನೀವೇ ಚುಚ್ಚಿಕೊಂಡಂಗೆ ಎಂದು ತಿಳಿಸಿದರು.
ಸೋನಿಯಾ ಗಾಂಧಿ ಮಧ್ಯ ಪ್ರವೇಶ ಮಾಡಲಿ ಎಂಬ ಸಿ.ಟಿ. ರವಿ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿ.ಟಿ. ರವಿಯವರಿಗೆ ಸದ್ಯಕ್ಕೆ ಎಲ್ಲೂ ಜಾಗವಿಲ್ಲ, ಹಾಗಾಗಿ ಮಂಡ್ಯಕ್ಕೆ ಹೋಗಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರೇ ಹೇಳಿದ್ದಾರೆ ಪ್ರಧಾನಿ ಮಧ್ಯಪ್ರವೇಶ ಮಾಡಲಿ ಅಂತ ಎಂದು ತಿರುಗೇಟು ನೀಡಿದರು.
ಹೊಸ ಹುರುಪು ಪ್ರತಿಭಟನೆ ಮಾಡಲಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದ್ರೂ ಹೋರಾಟ ಮಾಡಬಹುದು. ಅವರವರ ಹೋರಾಟ ಅವರು ಮಾಡ್ತಾರೆ. ಒಳಗಡೆ ಬಂದಾಗ ರಾಜ್ಯದ ಹಿತ, ಹೊರಗಡೆ ಹೋದಾಗ ರಾಜಕಾರಣ ಇದು ನಡೆಯುತ್ತದೆ. ನಾವು ರಾಜ್ಯದ ಹಿತ ಕಾಪಾಡುತ್ತಿದ್ದೇವೆ. ಹೊಸ ಹುರುಪು ಪ್ರತಿಭಟನೆ ಮಾಡ್ತಾ ಇದ್ದಾರೆ, ಮಾಡಲಿ. ನೀರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕುಟುಕಿದರು.