ಕಲಬುರಗಿ : ಪ್ರಧಾನಿ ಮೋದಿಗೆ ಪತ್ರ ಬರೆದು ಸಮಯ ಕೊಡಿ ಅಂತನೂ ಕೇಳಿದ್ದೇನೆ. ಆದ್ರೆ, ಈವರೆಗೂ ಮೋದಿ ಟೈಮ್ ಕೊಟ್ಟಿಲ್ಲ.. ಮತ್ತೊಮ್ಮೆ ಪತ್ರ ಬರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ಡಿಆರ್ಎಫ್ ನಾರ್ಮ್ಸ್ ಬದಲಾವಣೆ ಮಾಡಬೇಕು ಅಂತ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ದೆಹಲಿಗೆ ನಿಯೋಗ ಹೊಗಬೇಕು ಅಂತ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ಮಾಡಿದ್ದೇನೆ ಎಂದರು.
ಮೊನ್ನೆ ಸಂಸದರುಗಳಿಗೆ ಹೇಳಿದ್ದೇನೆ ಪ್ರಧಾನಿ ಸಮಯ ಪಡೆಯಲು. ಆದರೆ, ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಅವ್ರು. ಬರ ತಾಲ್ಲೂಕುಗಳಿಗೆ ಕೇಂದ್ರ ಪರಿಹಾರ ಕೊಡಬೇಕು ತಕ್ಷಣಕ್ಕೆ. ಕೇಂದ್ರಕ್ಕೆ ಪರಿಹಾರದ ಮೇಮೊರಂಡಮ್ ಇನ್ನೂ ತಯಾರು ಮಾಡಿಲ್ಲ ಎಂದು ಬೇಸರಿಸಿದರು.
ಬಸವಣ್ಣನ ವಚನ ಹೇಳಿದ ಸಿಎಂ
ಇಂಡಿಯಾ ಒಕ್ಕೂಟ ಸನಾತನ ಧರ್ಮದ ವಿರುದ್ಧ ಇದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಸಿಎಂ, ಧರ್ಮದಲ್ಲಿ ಕರುಣೆ ಇರಬೇಕು, ಧರ್ಮ ಅಂದ್ರೆ ಮನುಷ್ಯತ್ವ ಇರಬೇಕು ಅಷ್ಟೆ. ನಾವು ಯಾವ ಧರ್ಮದ ವಿರುದ್ಧ ಇಲ್ಲ, ಎಲ್ಲ ಧರ್ಮದ ಪರ ಇದ್ದೇವೆ. ಜನರಿಗೋಸ್ಕರ ಇರುವ ಧರ್ಮ, ಧರ್ಮ ಮನಷ್ಯನ ಒಳಿತಿಗೊಸ್ಕರ ಇರಬೇಕು. ದಯೆಯೆ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮ ಯಾವುದಯ್ಯ ಅಂತ ಸಿದ್ದರಾಮಯ್ಯ ಬಸವಣ್ಣನ ವಚನ ಹೇಳಿದರು.
ನೋ ರಿಯಾಕ್ಷನ್.. ನೋ ರಿಯಾಕ್ಷನ್
ತಮ್ಮ ವಿರುದ್ಧ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ ಕೂಡಲೇ, ನೋ ರಿಯಾಕ್ಷನ್.. ನೋ ರಿಯಾಕ್ಷನ್.. ಎಂದು ಸಿದ್ದರಾಮಯ್ಯ ಎದ್ದು ಹೊರಟುಹೋದರು.