ಗದಗ : ಕೋಟ್ಯಂಟತರ ರೂಪಾಯಿ ವಂಚನೆ ಆರೋಪದಲ್ಲಿ ಚೈತ್ರಾ ಕುಂದಾಪುರ ಬಂಧನ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚೈತ್ರಾ ಕುಂದಾಪುರ ಅವರು ಯಾರು ಯಾರಿಗೆ ಏನೇನು ಹೇಳಿದ್ದಾರೆ ಅನ್ನೋದು ಮಾಹಿತಿ ಇಲ್ಲ. ಆದರೆ, ಯಾರೇ ಇರಲಿ.. ತನಿಖೆ ಆಗಲಿ.. ಸತ್ಯಾಸತ್ಯತೆ ಹೊರಗೆ ಬರಲಿ ಎಂದು ಹೇಳಿದ್ದಾರೆ.
ತಮಿಳನಾಡಿಗೆ ಕಾವೇರಿ ನೀರು ಬಿಡುವ ವಿಚಾರ ಕುರಿತು ಮಾತನಾಡಿ, ಸರ್ವಪಕ್ಷಗಳ ಸಭೆಯಲ್ಲಿ ನೀರು ಬಿಡುವುದಿಲ್ಲ ಎಂಬ ನಿರ್ಣಯ ಆಗಿದೆ. ಈಗಾಗಲೇ ಸಾಕಷ್ಟು ನೀರನ್ನು ಹರಿಸಿದ್ದಾರೆ. ಡ್ಯಾಂನಲ್ಲಿ ನೀರು ಇಲ್ಲದಂತೆ ಮಾಡಿ ಇಟ್ಟಿದ್ದಾರೆ. 10,000 ಕ್ಯೂಸೆಕ್ಸ್ 15 ದಿನ ಹಾಗೂ 5,000 ಕ್ಯೂಸೆಕ್ಸ್ 15 ದಿನ ನೀರು ಹರಿಸಿದ್ದಾರೆ. ಹೀಗಾಗಿ, ಕುಡಿಯೋಕು ಸಹ ನೀರು ಇಲ್ಲದ ಪರಿಸ್ಥಿತಿ ಇದ್ದು, ನೀರು ಬಿಡಬಾರದು ಅಂತ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.
ನೀರು ಬಿಟ್ಟಿದ್ದೇ ನಿಜವಾದ್ರೆ..!
12 ತಾರೀಖು ನಂತರ ನೀರು ಬೀಡುವುದಿಲ್ಲ ಅಂತ ಸುಪ್ರೀಂಕೋರ್ಟಗೆ ಈಗಾಗಲೇ ಅಫಿಡಿವೆಟ್ ಹಾಕಿದ್ದಾರೆ. ಸರ್ಕಾರ ಇದಕ್ಕೆ ಬದ್ಧರಾಗಿರಬೇಕು ಅಂತ ಹೇಳಿದ್ದೇನೆ. ಅಕಸ್ಮಾತ್ ನೀರು ಬಿಟ್ಟಿದ್ದೇ ನಿಜವಾದರೆ, ಕಾವೇರಿ ಜಲಾನಯನ ಪ್ರದೇಶದ ರೈತರು ಹಾಗೂ ಜನರಿಗೆ ಸರ್ಜಾರ ದೊಡ್ಡ ಅನ್ಯಾಯ ಮಾಡಿದಂತಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎಂಪಿ ಚುನಾವಣೆ ಸ್ಪರ್ಧೆ?
ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಬೊಮ್ಮಾಯಿ ಕಣಕ್ಕಿಳಿಯುತ್ತಾರಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ನಾನು ಆಕಾಂಕ್ಷಿ ಅಲ್ಲ ಅಂತ ಈಗಾಗಲೇ ಉತ್ತರ ನೀಡಿದ್ದೇನೆ. ಯಾವ ಕ್ಷೇತ್ರದ ಬಗ್ಗೆಯೂ ಚರ್ಚೆ ಆಗಿಲ್ಲ. ಯಾವ ಸೂಚನೆಯೂ ಆಗಿಲ್ಲ, ಅವೆಲ್ಲ ಊಹಾಪೋಹಾಗಳು ಎಂದು ಸ್ಪಷ್ಟನೆ ನೀಡಿದ್ದಾರೆ.