ಹಾವೇರಿ : ‘ಇನ್ಮುಂದೆ ನೀರು ಬಿಡಲ್ಲ ಅಂತ ಸರ್ಕಾರ ಅವತ್ತು ಹೇಳಿತ್ತು, ಆದ್ರು ಬಿಟ್ಟಿದ್ದಾರೆ. ಇವತ್ತು ಸರ್ವಪಕ್ಷ ಸಭೆ ಕರೆದಿದ್ದು ನೋಡಿದ್ರೆ, ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಪಾದಿಸಲು ಸಾಧ್ಯವಾಗ್ತಿಲ್ಲ. ಮತ್ತೆ ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ’ ಎಂದು ಕಾಂಗ್ರೆಸ್ ಸರ್ಕಾರದ ನಡೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರುಕ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರಾಜ್ಯ ಸರ್ಕಾರದ ಜೊತೆಗಿದ್ದೇವೆ, ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರು ಒತ್ತಡಕ್ಕೆ ಮಣಿಯಬಾರದು. ಈ ಸಂದರ್ಭದಲ್ಲಿ ರಾಜ್ಯದ ನಾಯಕತ್ವ ಎಷ್ಟು ಗಟ್ಟಿಯಾಗಿದೆ ಅಂತ ತೋರಿಸಿಕೊಡಬೇಕಿದೆ ಎಂದು ಸಿಎಂಗೆ ಅಭಯ ನೀಡಿದರು.
ಕಾವೇರಿ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆದಿದ್ದಾರೆ. ತಡರಾತ್ರಿ ಆಹ್ವಾನ ಬಂದಿದ್ದರಿಂದ ನಾನು ಸಭೆಗೆ ಹೋಗಲು ಆಗಿಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ, ಈಗಾಗಲೇ ಸಾಕಷ್ಟು ನೀರನ್ನು ಹರಿಸಿದ್ದೇವೆ. 16 ರಿಂದ 17 ಟಿಎಂಸಿ ನೀರು ಈಗಾಗಲೇ ಹರಿಸಿದ್ದೇವೆ. ಮತ್ತೆ 5,000 ಸಾವಿರ ಕ್ಯೂಸೆಕ್ಸ್ ನೀರು ಹರಿಸುವುದು ಸಾಧ್ಯವಿಲ್ಲದ ಮಾತು ಎಂದು ಬೊಮ್ಮಾಯಿ ಹೇಳಿದರು.
ಸರ್ಕಾರ ಬದ್ದವಾಗಿರಬೇಕು
ಕುಡಿಯುವ ನೀರಿಗೂ ಕೊರತೆಯಿದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಕೊಟ್ಟಿದೆ. 12ನೇ ತಾರೀಕಿನ ನಂತರ ನೀರು ಕೊಡಲು ಆಗಲು ಅಂತ. ಇದಕ್ಕೆ ರಾಜ್ಯ ಸರ್ಕಾರ ಬದ್ದವಾಗಿರಬೇಕು. ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ, ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದು ಸಲಹೆ ನೀಡಿದರು.