ದೆಹಲಿ: ದೇಶದಲ್ಲಿ ಮತ್ತೊಂದು ಆತಂಕ ಆವರಿಸಿದ್ದು, ಮಾರಕ ನಿಫಾ ವೈರಸ್ಗೆ ಕೇರಳದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಿಫಾ ವೈರಸ್ ಸೋಂಕಿನಿಂದಾದ ಮೊದಲ ಸಾವು ಆ. 30, ಎರಡನೇ ಸಾವು ಸೆ. 11ರಂದು ಸಂಭವಿಸಿದೆ. ಮಾತ್ರವಲ್ಲ ಸದ್ಯ ದೇಶದಲ್ಲಿ ನಾಲ್ವರು ನಿಫಾ ವೈರಸ್ ಸೋಂಕಿಗೆ ಒಳಗಾಗಿರುವ ಶಂಕೆ ಇದ್ದು, ಅವರನ್ನು ತೀವ್ರ ನಿಗಾದಲ್ಲಿ ಇರಿಸಿ, ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೃಹತ್ ಮೊತ್ತಕ್ಕೆ ಸೇಲಾಯ್ತು ‘ಜವಾನ್’ ಒಟಿಟಿ ಹಕ್ಕು!
ನಿಫಾ ವೈರಸ್ ಪರಿಸ್ಥಿತಿ ನಿಯಂತ್ರಣ ಸಲುವಾಗಿ ಕೇಂದ್ರದಿಂದ ಕೇರಳಕ್ಕೆ ತಂಡವನ್ನು ಕಳುಹಿಸಿಕೊಡಲಾಗಿದ್ದು, ಅವರು ಅಲ್ಲಿನ ರಾಜ್ಯ ತಂಡದ ಜತೆ ಸಮನ್ವಯ ನಡೆಸಿ ಸಹಾಯ ಮಾಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ. ಬಾವಲಿಗಳಿಂದ ಈ ವೈರಸ್ ಹರಡುತ್ತಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಸಲುವಾಗಿ ಆರೋಗ್ಯ ಸಚಿವಾಲಯದಿಂದ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದೂ ಮಾಂಡವೀಯ ಮಾಹಿತಿ ನೀಡಿದ್ದಾರೆ.